ನವದೆಹಲಿ: ದಾಖಲೆಯ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸುವ ಹಾದಿಯಲ್ಲಿ ಬಿಜೆಪಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಪಕ್ಷದ ಜಯದ ಜೊತೆಗೆ ದೇಶದ ಷೇರುಪೇಟೆಯಲ್ಲೂ ದಾಖಲೆಯ ಏರಿಕೆ ಆಗಲಿದೆ ಎಂದಿದ್ದಾರೆ.
ಜೂನ್ 4ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
'ಜೂನ್ 4ರಂದು ಬಿಜೆಪಿ ದಾಖಲೆ ಸಂಖ್ಯೆ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವುದರೊಂದಿಗೆ ಷೇರುಪೇಟೆಯ ಸೂಚ್ಯಂಕವೂ ಸಹ ಹೊಸ ದಾಖಲೆ ಮಟ್ಟಕ್ಕೆ ಏರಲಿದೆ' ಎಂದು ಎಕನಾಮಿಕ್ ಟೈಮ್ಸ್ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
2014ರಲ್ಲಿ 25,000ದಷ್ಟಿದ್ದ ಸೆನ್ಸೆಕ್ಸ್ ಸೂಚ್ಯಂಕವು ಈಗ ಸುಮಾರು 75,000ವರೆಗೆ ಏರಿಕೆ ಕಂಡಿದೆ. ಹೂಡಿಕೆದಾರರು ನಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದಾರೆ.
'ಕಳೆದೊಂದು ದಶಕದಲ್ಲಿ ಷೇರುಪೇಟೆಯ ಬೆಳವಣಿಗೆಯು ನಮ್ಮ ಮೇಲೆ ಹೂಡಿಕೆದಾರರು ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ನಾನು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ಸೆನ್ಸೆಕ್ಸ್ 25000 ಅಂಶಗಳ ಆಸುಪಾಸಿನಲ್ಲಿತ್ತು. ಇಂದು ಅದು ಸುಮಾರು 75000 ಅಂಶಗಳಷ್ಟಿದೆ. ಇದು ಐತಿಹಾಸಿಕ ಹೆಚ್ಚಳವಾಗಿದೆ. ಇತ್ತೀಚೆಗೆ, ನಮ್ಮ ಆರ್ಥಿಕತೆಯ ಮೌಲ್ಯ ದಾಖಲೆಯ 5 ಟ್ರಿಲಿಯನ್‌ಗೆ ಏರಿಕೆಯಾಗಿದೆ' ಎಂದು ಹೇಳಿದರು.
'10 ವರ್ಷಗಳ ಷೇರುಪೇಟೆ ಪ್ರಗತಿ ಬಗ್ಗೆ ಕಣ್ಣಾಡಿಸಿ, ಎಷ್ಟು ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ ಎಂಬುದು ತಿಳಿದುಬರುತ್ತದೆ. ನಾಗರಿಕರು ಭಾರತದ ಆರ್ಥಿಕ ಕ್ಷೇತ್ರದ ಮೇಲೆ ಯಾವ ಮಟ್ಟದ ವಿಶ್ವಾಸ ಇಡಲು ಆರಂಭಿಸಿದ್ದಾರೆ ಎಂಬುದು ತಿಳಿಯುತ್ತದೆ. 2014ರಲ್ಲಿ 1 ಕೋಟಿಯಷ್ಟಿದ್ದ ಮ್ಯೂಚುವಲ್ ಫಂಡ್ ಹೂಡಿಕೆದಾರರ ಸಂಖ್ಯೆ ಈಗ 4.5 ಕೋಟಿಗೆ ಏರಿಕೆಯಾಗಿದೆ. ಇದರಿದಾಗಿ ನಮಗೆ ದೇಶೀಯ ಹೂಡಿಕೆಯ ದೊಡ್ಡ ನೆಲೆ ಸಿಕ್ಕಿದೆ. ನಾವು ಕೈಗೊಂಡ ಷೇರುಪೇಟೆ ಸುಧಾರಣೆಗಳ ಬಗ್ಗೆ ನಮ್ಮ ಹೂಡಿಕೆದಾರರಿಗೆ ಅರಿವಿದೆ. ಈ ಸುಧಾರಣೆಗಳು ದೃಢ ಮತ್ತು ಪಾರದರ್ಶಕ ಹಾಣಕಾಸು ವ್ಯವಸ್ಥೆಯನ್ನು ಸೃಷ್ಟಿಸಿದವು. ಈ ಮೂಲಕ ಪ್ರತಿಯೊಬ್ಬ ಭಾರತೀಯನಿಗೂ ಷೇರು ಪೇಟೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು' ಎಂದಿದ್ದಾರೆ.