ನವದೆಹಲಿ: ಆರು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 49 ಕ್ಷೇತ್ರಗಳಲ್ಲಿ ಸೋಮವಾರ ಐದನೇ ಹಂತದಲ್ಲಿ ಚುನಾವಣೆ ನಡೆದಿದ್ದು, ಶೇ 60.09ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನವದೆಹಲಿ: ಆರು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 49 ಕ್ಷೇತ್ರಗಳಲ್ಲಿ ಸೋಮವಾರ ಐದನೇ ಹಂತದಲ್ಲಿ ಚುನಾವಣೆ ನಡೆದಿದ್ದು, ಶೇ 60.09ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ತಡರಾತ್ರಿಯ ಮಾಹಿತಿಯ ಅನುಸಾರ, ಮಹಾರಾಷ್ಟ್ರದಲ್ಲಿ ಕನಿಷ್ಠ ಪ್ರಮಾಣದಲ್ಲಿ ಅಂದರೆ ಶೇ 54.29 ರಷ್ಟು ಮತದಾನ ಆಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಅಂದರೆ ಶೇ 74.65ರಷ್ಟು ಮತದಾನವಾಗಿದೆ.
ಉಳಿದಂತೆ ಲಡಾಖ್‌ನಲ್ಲಿ ಶೇ 69.62ರಷ್ಟು, ಒಡಿಶಾದಲ್ಲಿ ಶೇ 67.59ರಷ್ಟು, ಜಾರ್ಖಂಡ್‌ನಲ್ಲಿ ಶೇ 63.07ರಷ್ಟು, ಉತ್ತರಪ್ರದೇಶದಲ್ಲಿ ಶೇ 57.79ರಷ್ಟು, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 56.73ರಷ್ಟು ಹಾಗೂ ಬಿಹಾರದಲ್ಲಿ ಶೇ 54.85ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಪಶ್ಚಿಮ ಬಂಗಾಳದ ವಿವಿಧೆಡೆ ಹಿಂಸಾಚಾರ, ಉತ್ತರಪ್ರದೇಶದ ಕೆಲವೆಡೆ ಮತದಾನ ಬಹಿಷ್ಕಾರ ಘಟನೆಗಳು ನಡೆದಿವೆ. ಅಲ್ಲದೆ, ಒಡಿಶಾ, ಪಶ್ಚಿಮ ಬಂಗಾಳದ ಕೆಲವೆಡೆ ಮತಯಂತ್ರಗಳಲ್ಲಿ ತಾಂತ್ರಿಕದೋಷ ಕಂಡುಬಂದಿದ್ದು, ಕೆಲಕಾಲ ಗೊಂದಲ ಉಂಟಾಗಿತ್ತು.
ವಿದ್ಯುನ್ಮಾನ ಮತಯಂತ್ರ ತಿರುಚಿದ ಹಾಗೂ ಏಜೆಂಟರು ಮತಗಟ್ಟೆ ಪ್ರವೇಶಿಸಲು ಅಡ್ಡಿಪಡಿಸಿದ್ದು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಂದ ಒಟ್ಟು 1,036 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
4.26 ಕೋಟಿ ಮಹಿಳೆಯರು, 5,409 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 8.95 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದರು. ಒಟ್ಟು 94,732 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಆರನೇ ಹಂತದ ಮತದಾನ ಮೇ 25, ಏಳು ಮತ್ತು ಅಂತಿಮ ಹಂತದ ಮತದಾನ ಜೂನ್ 1ರಂದು ನಡೆಯಲಿದೆ.