ನವದೆಹಲಿ :ನೋಟಾ ಕೇವಲ ಸಾಂಕೇತಿಕ ಪರಿಣಾಮವನ್ನು ಹೊಂದಿದ್ದು, ಯಾವುದೇ ಕ್ಷೇತ್ರದಲ್ಲಿ ಶೇ. 50ಕ್ಕಿಂತ ಹೆಚ್ಚು ಮತದಾರರು ನೋಟಾವನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ಚುನಾವಣಾ ಫಲಿತಾಂಶಗಳಲ್ಲಿ ಅದನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಲು ಚಿಂತನೆ ನಡೆಸಬಹುದಾಗಿದೆ ಎಂದು ರವಿವಾರ ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಹೇಳಿದ್ದಾರೆ.
100 ಮತಗಳ ಪೈಕಿ 99 ಮತಗಳು ನೋಟಾಗೆ ಬಿದ್ದು, ಉಳಿದ ಒಂದು ಮತವನ್ನು ಯಾವುದೇ ಅಭ್ಯರ್ಥಿ ಗಳಿಸಿದರೂ, ಆತ ವಿಜಯಶಾಲಿಯಾಗಿ ಹೊರಹೊಮ್ಮುತ್ತಾನೆ ಎಂದೂ ಮಧ್ಯಿಪ್ರದೇಶ ಕೇಡರ್ ನ ಮಾಜಿ ಐಎಎಸ್ ಅಧಿಕಾರಿಯಾಗಿರುವ ರಾವತ್ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ಹಾಲಿ ಸನ್ನಿವೇಶದಲ್ಲಿ ನೋಟಾಗೆ ಕೇವಲ ಸಾಂಕೇತಿಕ ಮಹತ್ವವಿದೆ ಹಾಗೂ ಈ ಆಯ್ಕೆಯು ಯಾವುದೇ ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ. ಚುನಾವಣೆಯಲ್ಲಿ ಒಂದು ವೇಳೆ 100 ಮತಗಳ ಪೈಕಿ 99 ಮತಗಳು ನೋಟಾಗೆ ಬಿದ್ದು, ಉಳಿದ ಒಂದು ಮತವನ್ನು ಯಾವುದೇ ಅಭ್ಯರ್ಥಿ ಗಳಿಸಿದರೂ, ಅಂತಹ ಅಭ್ಯರ್ಥಿಯನ್ನು ವಿಜಯಶಾಲಿ ಎಂದು ಘೋಷಿಸಲಾಗುತ್ತದೆಯೆ ಹೊರತು ನೋಟಾವನ್ನಲ್ಲ" ಎಂದು ರಾವತ್ ಹೇಳಿದ್ದಾರೆ.
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಎಪ್ರಿಲ್ 29ರಂದು ತನ್ನ ಅಭ್ಯರ್ಥಿಯಾದ ಅಕ್ಷಯ್ ಕಾಂತಿ ಬಾಮ್ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರಿಂದ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಘಾತಕ್ಕೆ ತುತ್ತಾಗಿತ್ತು.
ನಂತರ ಬಾಮ್ ಬಿಜೆಪಿ ಸೇರ್ಪಡೆಯಾಗಿದ್ದರಿಂದ, ಕೇಸರಿ ಪಕ್ಷಕ್ಕೆ ಪಾಠ ಕಲಿಸಲು ಮೇ 13ರಂದು ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ನಡೆಯುವ ಮತದಾನದ ಸಂದರ್ಭದಲ್ಲಿ ವಿದ್ಯುನ್ಮಾನ ಯಂತ್ರದಲ್ಲಿ ಲಭ್ಯವಿರುವ ನೋಟಾ ಆಯ್ಕೆಯ ಗುಂಡಿಯನ್ನು ಒತ್ತುವಂತೆ ಜನರಿಗೆ ಕಾಂಗ್ರೆಸ್ ಮನವಿ ಮಾಡಿತ್ತು.
ಇಂದೋರ್ ಲೋಕಸಭಾ ಕ್ಷೇತ್ರದ 72 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷವು ಚುನಾವಣಾ ಸ್ಪರ್ಧೆಯಿಂದ ಹೊರ ಬಿದ್ದಿದೆ.
2019ರ ಲೋಕಸಭಾ ಚುನಾವಣೆ ವೇಳೆ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಶೇ. 69ರಷ್ಟು ಮತದಾನ ದಾಖಲಾಗಿತ್ತು. ಈ ಪೈಕಿ 5,045 ಮತದಾರರು ಮಾತ್ರ ನೋಟಾ ಆಯ್ಕೆ ಮಾಡಿದ್ದರು.