ಭರತ್ ಪುರ: ರಾಜಸ್ಥಾನದಲ್ಲಿ ಎನ್ಇಇಟಿ ಪರೀಕ್ಷೆಗೆ ನಕಲಿ ಅಭ್ಯರ್ಥಿಯಾಗಿ ಹಾಜರಾದ ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಭರತ್ ಪುರದಲ್ಲಿ ಈ ಘಟನೆ ವರದಿಯಾಗಿದ್ದು, ಅಭ್ಯರ್ಥಿ, ನಕಲಿ ಅಭ್ಯರ್ಥಿಯಾಗಿ ಹಾಜರಾದ ವೈದ್ಯಕೀಯ ವಿದ್ಯಾರ್ಥಿ ಹಾಗೂ ಇನ್ನಿತರ 5 ಮಂದಿಯನ್ನು ಬಂಧಿಸಲಾಗಿದೆ.
ಸರ್ಕಾರಿ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ಅಭಿಷೇಕ್ ಗುಪ್ತಾ ಹಾಗೂ ಆತನ ಸಹಪಾಠಿ ರವಿ ಮೀನಾ ಅಭ್ಯರ್ಥಿಗಳಿಂದ ಹಣ ಪಡೆದು ನಕಲಿ ಅಭ್ಯರ್ಥಿಗಳಾಗಿ ಎನ್ಇಇಟಿ ಪರೀಕ್ಷೆ ಬರೆಯುವ ದಂಧೆ ನಡೆಸುತ್ತಿದ್ದರು. ನಕಲಿ ಅಭ್ಯರ್ಥಿಗಳಾಗಿ ಹಾಜರಾಗಿ ಪರೀಕ್ಷೆ ಬರೆಯುವುದಕ್ಕೆ ಅಭಿಷೇಕ್ ಗುಪ್ತಾ 10 ಲಕ್ಷ ರೂಪಾಯಿಗಳನ್ನು ಪಡೆದಿದ್ದ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿದೆ.
"ಪರೀಕ್ಷಾ ಕೇಂದ್ರವೊಂದರಲ್ಲಿ ಅಭಿಷೇಕ್ ರಾಹುಲ್ ಗುರ್ಜರ್ ಹೆಸರಿನಲ್ಲಿ ಹಾಜರಾಗಿರುವುದು ಕಂಡು ಬಂದಿತು. ಅನುಮಾನದ ಮೇಲೆ ಇನ್ವಿಜಿಲೇಟರ್ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಆತನೊಂದಿಗೆ ಇತರ ಐವರು ಇದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ" ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಅಕ್ಲೇಶ್ ಕುಮಾರ್ ತಿಳಿಸಿದ್ದಾರೆ.
ಮಥುರಾ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾಸ್ಟರ್ ಆದಿತ್ಯೇಂದ್ರ ಶಾಲೆಯ ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಆತನ ಸಹಚರರು ಕಾರಿನಲ್ಲಿ ಕುಳಿತಿದ್ದರು. ಎಲ್ಲಾ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ತಿಳಿಸಿದ್ದಾರೆ.
ಗುಪ್ತಾ, ಮೀನಾ ಮತ್ತು ಗುರ್ಜರ್ ಅವರಲ್ಲದೆ, ಬಂಧಿತರನ್ನು ಅಮಿತ್, ದಯಾರಾಮ್ ಮತ್ತು ಸೂರಜ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.