ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಾಲಿವಾಲ್ ಅವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಅವರನ್ನು ಇಲ್ಲಿನ ನ್ಯಾಯಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪ್ರಕರಣ ಸಂಬಂಧ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಗೌರವ್ ಗೋಯಲ್ ಅವರು ನಡೆಸಿದರು.
'ಉಭಯ ಪಕ್ಷಗಾರರ ವಾದವನ್ನು ಆಲಿಸಿದ ಬಳಿಕ, ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವುದು ಅನಿವಾರ್ಯ ಎಂದು ನಾನು ಮನಗಂಡಿದ್ದೇನೆ. ಹೀಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತಿದ್ದೇನೆ' ಎಂದು ತೀರ್ಪು ನೀಡುವಾಗ ಹೇಳಿದ್ದಾರೆ.
ಸಾಕ್ಷ್ಯ ಸಂಗ್ರಹಿಸಲು ಬಿಭವ್ ಕುಮಾರ್ ಅವರನ್ನು ಮುಂಬೈ ಹಾಗೂ ರಾಜಧಾನಿಯ ಇನ್ನಿತರ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕಾಗಿದೆ. ಕಸ್ಟಡಿಗೆ ಪಡೆಯದೆ ಅದು ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಷನ್‌ನ ವಾದವನ್ನು ನ್ಯಾಯಾಲಯ ಪರಿಗಣಿಸಿತು.
'ಸದ್ಯ ಪ್ರಕರಣ ಪ್ರಾರಂಭಿಕ ಹಂತದಲ್ಲಿ ಇದ್ದು, ಎಫ್‌ಐಆರ್‌ನಲ್ಲಿ ಮಾಡಲಾಗಿರುವ ಆರೋಪ ಸ್ವಾತಿ ಮಾಲಿವಾಲ್ ಅವರ ಹೇಳಿಕೆಗೆ ತಾಳೆಯಾಗಬೇಕು' ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
'ತನಿಖೆಯನ್ನು ಪೂರ್ಣಗೊಳಿಸಿ ಸತ್ಯವನ್ನು ಬಯಲಿಗೆಳೆಯಲು ತನಿಖಾ ಸಂಸ್ಥೆಗೆ ಅವಕಾಶ ನೀಡಬೇಕು ಎನ್ನುವ ಸಾಂವಿಧಾನಿಕ ನ್ಯಾಯಾಲಯಗಳ ದೃಷ್ಟಿಕೋನದ ಬಗ್ಗೆ ನನಗೆ ಅರಿವಿದೆ. ಇದೇ ವೇಳೆ ಆಪಾದಿತರ ಹಕ್ಕನ್ನೂ ರಕ್ಷಿಸಬೇಕು' ಎಂದು ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಪ್ರತಿ 24 ಗಂಟೆಗಳಿಗೊಮ್ಮೆ ಆರೋಪಿಯ ಆರೋಗ್ಯ ತಪಾಸಣೆಯನ್ನು ಮಾಡಬೇಕು. ಯಾವುದೇ ರೀತಿಯ ಕಿರುಕುಳ ಕೊಡಬಾರದು' ಎಂದು ಕಸ್ಟಡಿಗೆ ಒಪ್ಪಿಸುವ ವೇಳೆ ಕೋರ್ಟ್ ಹೇಳಿದೆ.
ಪೊಲೀಸ್ ಕಸ್ಟಡಿಯ ಅವಧಿಯಲ್ಲಿ ಪತ್ನಿ ಹಾಗೂ ತಮ್ಮ ವಕೀಲರನ್ನು ಪ್ರತಿ ದಿನ 30 ನಿಮಿಷ ಭೇಟಿ ಮಾಡಲು ಬಿಭವ್‌ಗೆ ಅವಕಾಶ ನೀಡಿದೆ.