ನವದೆಹಲಿ: ಶನಿವಾರ ನಡೆದ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ 61.20 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಶನಿವಾರ ರಾತ್ರಿ 11.45ರ ವೇಳೆಗಿನ ಮಾಹಿತಿ ಇದಾಗಿದ್ದು, ಅಂದಾಜು ಅಂಕಿ ಅಂಶಗಳಾಗಿವೆ. ಇದು ಪರಿಷ್ಕರಣೆಗೊಳ್ಳಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಎಲ್ಲಾ ಹಂತಗಳಿಗೆ ಹೋಲಿಸಿದರೆ ದಾಖಲಾದ ಕಡಿಮೆ ಮತದಾನ ಪ್ರಮಾಣ ಇದು. ಐದನೇ ಹಂತದಲ್ಲಿ 2019ರಲ್ಲಿ ಶೇ 62.20ರಷ್ಟು ಮತದಾನವಾಗಿತ್ತು.
ಆರನೇ ಹಂತದಲ್ಲಿ ಎಂಟು ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳು 58 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. 2019ರಲ್ಲಿ ಈ ಕ್ಷೇತ್ರಗಳಲ್ಲಿ ಶೇ 64.4ರಷ್ಟು ಮತದಾನವಾಗಿತ್ತು.
ನಾಲ್ಕನೇ ಹಂತದಲ್ಲಿ ಶೇ 69.16, ಮೂರನೇ ಹಂತದಲ್ಲಿ ಶೇ 65.68, ಎರಡನೇ ಹಂತದಲ್ಲಿ ಶೇ 66.71, ಮೊದಲ ಹಂತದಲ್ಲಿ ಶೇ 66.14ರಷ್ಟು ಮತದಾನವಾಗಿತ್ತು.
ನಿಖರವಾದ ಮತದಾನ ಪ್ರಮಾಣ ಫಲಿತಾಂಶದ ಬಳಿಕವಷ್ಟೇ ತಿಳಿಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.