ಭೋಪಾಲ್: ಲೋಕಸಭಾ ಚುನಾವಣೆಗೆ ನಡೆದ ಮೊದಲ ಎರಡು ಹಂತದ ಮತದಾನದಲ್ಲಿ ಅಂತಿಮ ಮತದಾನ ಪ್ರಮಾಣದಲ್ಲಿ ಏರಿಕೆಯಾಗಿರುವುದರ ಬಗ್ಗೆ ಕಾಂಗ್ರೆಸ್ ಪ್ರಶ್ನಿಸಿದೆ.
ತಾತ್ಕಾಲಿಕ ಅಂಕಿ-ಅಂಶಗಳು ಹಾಗೂ ನಿಖರ ಅಂಕಿ-ಅಂಶಗಳಿಗೆ ಹೋಲಿಕೆ ಮಾಡಿದಲ್ಲಿ ಅಂತಿಮ ಮತದಾನ ಪ್ರಮಾಣ ಶೇ.6ರಷ್ಟು ಏರಿಕೆ ಕಂಡಿದೆ. ಈ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಿಭಾಗದ ಉಸ್ತುವಾರಿ ಮುಖೇಶ್ ನಾಯ್ಕ್ ಹೇಳಿದ್ದಾರೆ.
ಇತಿಹಾಸದಲ್ಲಿ ನಿಖರವಾದ ಮತದಾನ ಪ್ರಮಾಣವನ್ನು ಬಿಡುಗಡೆ ಮಾಡುವುದಕ್ಕೆ ಚುನಾವಣಾ ಆಯೋಗ ಈ ವರೆಗೂ ಇಷ್ಟು ಸಮಯ ತೆಗೆದುಕೊಂಡ ಉದಾಹರಣೆಗಳಿಲ್ಲ. ಈ ಬಗ್ಗೆ ಇಸಿಐ ಸ್ಪಷ್ಟನೆ ನೀಡಬೇಕೆಂದು ಮುಖೇಶ್ ನಾಯ್ಕ್ ಒತ್ತಾಯಿಸಿದ್ದಾರೆ.
ಮೊದಲ ಹಂತದ 102 ಸ್ಥಾನಗಳಿಗೆ ಹಾಗೂ 2 ನೇ ಹಂತದ 88 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಾತ್ಕಾಲಿಕ ಮತದಾನ ಪ್ರಮಾಣದ ಅಂಕಿ-ಅಂಶಗಳಿಗೂ ನಿಖರ ಅಂಕಿ- ಅಂಶಗಳಿಗೂ ಶೇ.6 ರಷ್ಟು ವ್ಯತ್ಯಾಸಗಳಿದೆ. ಈ ಹಿಂದೆ ಚುನಾವಣಾ ಆಯೋಗ ನಿಖರ ಅಂಕಿ-ಅಂಶಗಳನ್ನು ಚುನಾವಣೆ ನಡೆದ ಒಂದು ಅಥವಾ 36 ಗಂಟೆಗಳಲ್ಲಿ ನೀಡುತ್ತಿತ್ತು. ಈ ಬಾರಿ ನಿಖರ ಅಂಕಿ-ಅಂಶ ಮುಂದಿಡಲು ಆಯೋಗ 10 ದಿನಗಳ ಸಮಯ ತೆಗೆದುಕೊಂಡಿದೆ ಎಂದು ನಾಯ್ಕ್ ಆರೋಪಿಸಿದ್ದಾರೆ.
ತಾತ್ಕಾಲಿಕ ಅಂಕಿಅಂಶಗಳಲ್ಲಿ, ಮೊದಲ ಹಂತದಲ್ಲಿ ಶೇಕಡಾ 60 ಮತ್ತು ಎರಡನೇ ಹಂತದಲ್ಲಿ 61 ಶೇಕಡಾ (ವಾಸ್ತವವಾಗಿ ಶೇಕಡಾ 60.96) ಮತದಾನದ ಪ್ರಮಾಣವ ವರದಿಯಾಗಿತ್ತು. 10 ದಿನಗಳ ನಂತರ ಆಯೋಗ ನಿಖರವಾದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದಾಗ, ಮೊದಲ ಹಂತದಲ್ಲಿ ಶೇಕಡಾ 66.14 ಮತ್ತು ಎರಡನೇ ಹಂತದಲ್ಲಿ ಶೇಕಡಾ 66.76 ರಷ್ಟು ವ್ಯತ್ಯಾಸ ಕಂಡುಬಂದಿದೆ, ಭಾರತದ ಇತಿಹಾಸದಲ್ಲಿ ಇಂಥದ್ದು ನಡೆದಿರಲಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.