ನವದೆಹಲಿ: ಶನಿವಾರ ಅಂತಿಮ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಪ್ರಚಾರವನ್ನು ಮುಕ್ತಾಯಗೊಳಿಸಿದರು. ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಬಿಜೆಪಿ ಕಣ್ಣಿಟ್ಟಿದ್ದು, ಪ್ರಧಾನಿ ಮೋದಿ ದೇಶದ ಉದ್ದಗಲಕ್ಕೂ ತಮ್ಮ ಪಕ್ಷದ ಪರವಾಗಿ ವ್ಯಾಪಕ ಪ್ರಚಾರ ನಡೆಸಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಗಾಗಿ 75 ದಿನಗಳಲ್ಲಿ ರೋಡ್ ಶೋ, ರ‍್ಯಾಲಿ ಸೇರಿದಂತೆ 200 ಕ್ಕೂ ಹೆಚ್ಚು ಚುನಾವಣಾ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಏಳು ಹಂತದ ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಇದೇ ಮೊದಲ ಪ್ರಧಾನಿ ಮೋದಿ ಅವರು ವಿವಿಧ ಮಾಧ್ಯಮ ಸಂಸ್ಥೆಗಳಿಗೆ ದಾಖಲೆ ಸಂಖ್ಯೆಯ ಸಂದರ್ಶನಗಳನ್ನು ನೀಡಿದ್ದು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸಿದ್ದಾರೆ.
ಪ್ರಧಾನಿಯವರು ಚುನಾವಣಾ ಪ್ರಚಾರದ ಕೊನೆಯಲ್ಲಿ ಆಧ್ಯಾತ್ಮಿಕ ಪ್ರಯಾಣ ಕೈಗೊಳ್ಳುವ ಪ್ರಧಾನಿ ಇಂದಿನಿಂದ ಜೂನ್ 1ರವರೆಗೆ ಕನ್ಯಾಕುಮಾರಿಯಲ್ಲಿ ತಂಗಲಿದ್ದಾರೆ. ಅಲ್ಲಿನ ಸ್ವಾಮಿ ವಿವೇಕಾನಂದ ಮಂಟಪದಲ್ಲಿ ಧ್ಯಾನ ಮಾಡಲು ಪ್ರಧಾನಿ ಯೋಜಿಸಿದ್ದಾರೆ. ಇದು ಭಾರತದ ದಕ್ಷಿಣದ ತುದಿಯಾಗಿದ್ದು, ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ಸಂಧಿಸುವ ಸ್ಥಳವಾಗಿದೆ. ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ. ಪ್ರಧಾನಿ ಮೋದಿಯವರು ಕನ್ಯಾಕುಮಾರಿಗೆ ಹೋಗುವ ಮೂಲಕ ರಾಷ್ಟ್ರೀಯ ಏಕತೆಯ ಸಂಕೇತವನ್ನು ರವಾನಿಸುತ್ತಿದ್ದಾರೆ.
ಇದೇ ರೀತಿಯಲ್ಲಿ 2019ರಲ್ಲಿ ಕೇದಾರನಾಥಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ 2014ರಲ್ಲಿ ಶಿವಾಜಿಯ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. ಪ್ರಧಾನಿಯವರು ಈ ವರ್ಷ ಮಾರ್ಚ್ 16 ರಂದು ಕನ್ಯಾಕುಮಾರಿಯಿಂದಲೇ ಚುನಾವಣಾ ಪ್ರಚಾರ ಆರಂಭಿಸಿದ್ದರು.