ಶ್ರೀನಗರ(PTI): ಪಾಕಿಸ್ತಾನದಲ್ಲಿದ್ದುಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿದ್ದ 7 ಜನರಿಗೆ ಸೇರಿದ, ಜಮ್ಮು-ಕಾಶ್ಮೀರದಲ್ಲಿರುವ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಾರಾಮುಲ್ಲಾ ನ್ಯಾಯಾಲಯದಿಂದ ಈ ಕುರಿತ ಆದೇಶವನ್ನು ಪಡೆದ ಬೆನ್ನಲ್ಲೇ, ಉಗ್ರ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದವರಿಗೆ ಸಂಬಂಧಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಜಮೀನನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಉಗ್ರರ ನಿರ್ವಹಣೆ ಮಾಡುವವರನ್ನು, ಶಬ್ಬೀರ್ ಅಹ್ಮದ್ ಸೋಫಿ (ಶೇಖ್‌ಪುರ), ಗುಲಾಮ್ ನಬಿ ಅಲಾಯಿ (ವಾರಿಪೊರಾ ಪಾಯೀನ್), ಗುಲಾಮ್ ನಬಿ ಶೇಖ್ (ವಾರಿಪೊರಾ ಬಾಲಾ), ಶರೀಫ್ ಉದ್-ದೀನ್ ಚೋಪನ್ ಮತ್ತು ಗುಲ್ಲಾ ಶೇಖ್ (ರೇಶಿಪೊರಾ ಆಥೂರ), ಮೊಹಮ್ಮದ್ ರಫೀಕ್ ಖಾನ್ (ಸಲೂಸಾ) ಹಾಗೂ ಅಬ್ದುಲ್ ಹಮೀದ್ ಪರ‍್ರೆ (ಫ್ರಸ್ತಾರ್ ತಿಲ್ಗಾಂ) ಎಂದು ಗುರುತಿಸಲಾಗಿದೆ.