ನವದೆಹಲಿ: ಸುಳ್ಳು ಅಥವಾ ಉತ್ಪ್ರೇಕ್ಷಿತ ದೂರುಗಳನ್ನು ದಾಖಲಿಸುವುದನ್ನು ತಡೆಯುವ ಸಲುವಾಗಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 85 ಹಾಗೂ 86ಕ್ಕೆ ಅಗತ್ಯ ಬದಲಾವಣೆಗಳನ್ನು ಮಾಡಲು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನವದೆಹಲಿ: ಸುಳ್ಳು ಅಥವಾ ಉತ್ಪ್ರೇಕ್ಷಿತ ದೂರುಗಳನ್ನು ದಾಖಲಿಸುವುದನ್ನು ತಡೆಯುವ ಸಲುವಾಗಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 85 ಹಾಗೂ 86ಕ್ಕೆ ಅಗತ್ಯ ಬದಲಾವಣೆಗಳನ್ನು ಮಾಡಲು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ವ್ಯಾಪಕ ಪ್ರಮಾಣದಲ್ಲಿ ಉತ್ಪ್ರೇಕ್ಷಿತ ದೂರುಗಳು ದಾಖಲಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ವರದಕ್ಷಿಣೆ ವಿರೋಧಿ ಕಾನೂನನ್ನು ಪರಿಷ್ಕರಿಸುವಂತೆ 14 ವರ್ಷಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
'ಭಾರತೀಯ ನ್ಯಾಯ ಸಂಹಿತೆಯು ಜುಲೈ 1ರಿಂದ ಜಾರಿಗೆ ಬರಲಿದೆ. ಹೀಗಾಗಿ, ಈ ಎರಡು ಸೆಕ್ಷನ್‌ಗಳ ಕುರಿತು ಸಂಸತ್‌ನಿಂದ ಗಂಭೀರ ಪರಾಮರ್ಶೆ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕುರಿತು ಪರಿಶೀಲನೆ ನಡೆಸಿದೆವು' ಎಂದು ನ್ಯಾಯಮೂರ್ತಿಗಳು ಹೇಳಿದರು.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 85 ಮತ್ತು 86, ಮಹಿಳೆ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದವು.
'ಮಹಿಳೆಯ ಪತಿ ಅಥವಾ ಪತಿಯ ಸಂಬಂಧಿಕರು ಮಹಿಳೆಯನ್ನು ಕ್ರೂರವಾಗಿ ನಡೆಸಿಕೊಂಡ ಸಂದರ್ಭದಲ್ಲಿ, ಕ್ರೌರ್ಯ ಮೆರೆದವರಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಜೊತೆಗೆ ದಂಡವನ್ನೂ ವಿಧಿಸಬಹುದು' ಎಂದು ಸೆಕ್ಷನ್ 85 ಹೇಳುತ್ತದೆ.
ಸೆಕ್ಷನ್ 86, ಕ್ರೌರ್ಯವನ್ನು ವ್ಯಾಖ್ಯಾನಿಸುತ್ತದೆ. ಮಹಿಳೆಗೆ ನೀಡುವ ದೈಹಿಕ ಹಾಗೂ ಮಾನಸಿಕವಾಗಿ ಆಗುವ ತೊಂದರೆಯನ್ನು 'ಕ್ರೌರ್ಯ' ಎಂದು ಪರಿಗಣಿಸಲಾಗುತ್ತದೆ.
'ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 85 ಹಾಗೂ 86, ಐಪಿಯ ಸೆಕ್ಷನ್ 498ಎ ದ ಯಥಾವತ್ ನಕಲು ಆಗಿದೆ. ಆದರೆ, ಐಪಿಸಿಯ ಸೆಕ್ಷನ್ 498ಎಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ವಿವರಣೆ ನೀಡಲಾಗಿದ್ದು, ಅದನ್ನು ಸೆಕ್ಷನ್ 86 ಎಂದು ಕರೆಯಲಾಗಿದೆ. ಇದೊಂದೇ ಇವುಗಳಲ್ಲಿನ ವ್ಯತ್ಯಾಸ' ಎಂದು ನ್ಯಾಯಪೀಠ ಹೇಳಿದೆ.