ಕಾಸರಗೋಡು: ಭಾರತೀಯ ಕಲಾಪ್ರಾಕಾರಗಳು ಸಂಸ್ಕøತಿಯ ಪ್ರತೀಕವಾಗಿದೆ. ಸಂಗೀತ, ನೃತ್ಯ ಮೊದಲಾದ ವಿಶಿಷ್ಟ ಕಲೆಗಳಿಗೆ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಗೋಕುಲಂ ಗೋಶಾಲೆಯ ನಿರಂತರ ಪ್ರಯತ್ನ ಶ್ಲಾಘನೀಯ ಎಂದು ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅಡಿಗ ಅಭಿಪ್ರಾಯಪಟ್ಟರು.
ಬೇಕಲ ಗೋಕುಲಂ ಗೋಶಾಲೆ ಪರಂಪರಾ ವಿದ್ಯಾಪೀಠದಲ್ಲಿ ಬುಧವಾರ ಸಂಜೆ 9 ದಿನಗಳ ನೃತೋತ್ಸವ ‘ವೈಶಾಕ ನಟನಂ 24'ನ್ನು ದೀಪಬೆಳಗಿಸಿ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಸಂಗೀತ, ನೃತ್ಯ, ಯಕ್ಷಗಾನ, ಭಜನೆ ಮೊದಲಾದವುಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡಾಗ ಅದು ಮುಂದಿನ ತಲೆಮಾರಿಗೆ ವರ್ಗಾವಣೆಯಾಗುತ್ತದೆ. ಇಂತಹ ಕಲಾಪ್ರಾಕಾರಗಳನ್ನು ಉಳಿಸಿಕೊಳ್ಳುವಲ್ಲಿ ಹಿರಿಯರು ಮುತುವರ್ಜಿ ವಹಿಸಬೇಕು ಎಂದರು.
ಗೋಶಾಲೆಯ ಪ್ರಧಾನರಾದ ವಿಷ್ಣುಪ್ರಸಾದ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಹಾಗೂ ಪೂರಕಳಿ ಅಕಾಡೆಮಿ ಅಧ್ಯಕ್ಷ ಕೆ.ಕುಂಞÂರಾಮನ್, ಸಂಗೀತಗಾರ ಟಿ.ಪಿ.ಶ್ರೀನಿವಾಸನ್, ಮೋರ್ಸಿಂಗ್ ವಾದಕ ಪಯ್ಯನ್ನೂರು ಗೋವಿಂದ ಪ್ರಸಾದ್, ಪಲ್ಲವ ನಾರಾಯಣನ್ ಶುಭಹಾರೈಸಿದರು. ವಿನೋದ್ ಕೃಷ್ಣನ್ ಸ್ವಾಗತಿಸಿ, ಡಾ.ನಾಗರತ್ನ ವಂದಿಸಿದರು. ನಂತರ ಗಾಯತ್ರಿ ರಾಜಾಜಿ ಚೆನ್ನೈ, ತೀರ್ಥ ಇ. ಪೊದುವಾಳ್, ವರ್ಷ ರಾಜ್ ಕುಮಾರ್ ಮತ್ತು ವೈಗಾ ಮನೋಜ್ ನೃತ್ಯ ಪ್ರದರ್ಶಿಸಿದರು. ಸಂಜೆ 4ರಿಂದ 9ರ ತನಕ ಅರ್ಪಿತಾ ಹೆಗ್ಡೆ ಸಿರ್ಸಿ, ಕರ್ನಾಟಕ (ಭರತ ನಾಟ್ಯಂ), ನಯನಾ ನಾರಾಯಣನ್ (ಮೋಹಿನಿಯಾಟ್ಟಂ), ಅಶ್ವತಿ ಕೃಷ್ಣ (ಮೋಹಿನಿಯಾಟ್ಟಂ) ಅದಿತಿ ಅಖಿಲ್ ಪಯ್ಯನ್ನೂರ್ (ಭರತ ನಾಟ್ಯಂ), ಕಲಾಮಂಡಲಂ ಕೃಷ್ಣಪ್ರಿಯಾ (ಮೋಹಿನಿಯಾಟ್ಟಂ) ಪ್ರದರ್ಶಿಸಲಿದ್ದಾರೆ.