ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ವೇಗಗೊಂಡಿರುವ ಮಧ್ಯೆ ಮೇಲ್ಸೇತುವೆ ಕಾಂಕ್ರಿಟೀಕರಣಕ್ಕಾಗಿ ನಾಳೆ-ಸೋಮವಾರ ರಾತ್ರಿ 9:00 ಗಂಟೆಯಿಂದ ಮಂಗಳವಾರ ಬೆಳಗ್ಗೆ 9:00 ಗಂಟೆಯವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಲಾಗುವುದು.
ನುಳ್ಳಿಪಾಡಿ ಅಯ್ಯಪ್ಪ ಭಜನಾ ಮಂದಿರ ಮತ್ತು ಕಾಸರಗೋಡು ಹೊಸ ಬಸ್ ನಿಲ್ದಾಣದ ನಡುವಿನ 150 ಮೀಟರ್ ಮಾರ್ಗವನ್ನು ಮುಚ್ಚಲಾಗುವುದು.
ಹೊಸ ಬಸ್ ನಿಲ್ದಾಣದ ಬಳಿ ಇರುವ ಮುಂಡೋಳ್ ಆರ್ಕೇಡ್ ಕೆಡವುವ ವಿವಾದ ನ್ಯಾಯಾಲಯದಲ್ಲಿರುವುದರಿಂದ ಇಲ್ಲಿ ಯಂತ್ರಗಳ ಅಳವಡಿಕೆಗೆ ಮಿತಿ ಇದೆ. ಸರ್ವಿಸ್ ರಸ್ತೆಗೆ ಕಾಂಕ್ರೀಟ್ ಯಂತ್ರಗಳನ್ನು ಅಳವಡಿಸಿರುವುದರಿಂದ ರಸ್ತೆ ಬಂದ್ ಆಗಿದೆ ಎಂದು ಕಾಮಗಾರಿ ನಡೆಸುತ್ತಿರುವ ಉರಾಳುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ (ಯುಎಲ್ ಸಿಸಿಎಸ್) ಮಾಹಿತಿ ನೀಡಿದೆ.
ಸಂಚಾರ ನಿಯಂತ್ರಣ:
ಮಂಗಳೂರು ಕಡೆಯಿಂದ ಬರುವ ವಾಹನಗಳು ಹೊಸ ಬಸ್ ನಿಲ್ದಾಣ ಜಂಕ್ಷನ್‍ನಿಂದ ಯು-ಟರ್ನ್ ಪಡೆದು ಎಂ.ಜಿ. ರಸ್ತೆಯ ಮೂಲಕ, ಕಾಞಂಗಾಡ್-ಕಾಸರಕೋಡು ರಾಜ್ಯ ಹೆದ್ದಾರಿಯ ಮೂಲಕ ಸಾಗಲು ವ್ಯವಸ್ಥೆ ಕಲ್ಪಿಸಲಾಗುವುದು. ಚೆರ್ಕಳ ಕಡೆಯಿಂದ ಬರುವ ವಾಹನಗಳನ್ನು ವಿದ್ಯಾನಗರ-ಚೌಕಿ-ಉಳಿಯತ್ತಡ್ಕ ಮತ್ತು ಮಧೂರು ರಸ್ತೆ ಮೂಲಕ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗುವುದೆಂದು ಪೋಲೀಸರು ತಿಳಿಸಿದ್ದಾರೆ.