ಕಾಸರಗೋಡು : ಜಿಲ್ಲೆಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆಗೆ ಹಾಜರಾದ 20547 ವಿದ್ಯಾರ್ಥಿಗಳ ಪೈಕಿ 20473 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದುಕೊಳ್ಳುವ ಮೂಲಕ ಶೇ. 99.64 ಫಲಿತಾಂಶ ದಾಖಲಾಗಿದೆ. ಜಿಲ್ಲೆಯಲ್ಲಿ 10703 ಬಾಲಕರು ಮತ್ತು 9844 ಬಾಲಕಿಯರ ಪೈಕಿ 10649 ಬಾಲಕರು ಮತ್ತು 9824 ಬಾಲಕಿಯರು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ 79ಸರ್ಕಾರಿ ಹಾಗೂ 29ಅನುದಾನಿತ ಶಾಲೆಗಳಿಗೆ ಶೇ. ನೂರು ಫಲಿತಾಂಶ ದಾಖಲಾಗಿದೆ.
ಶೇ. ನೂರು ಫಲಿತಾಂಶ ದಾಖಲಿಸಿರುವ ಸರ್ಕಾರಿ ಶಾಲೆಗಳಲ್ಲಿ ಚೆರ್ಕಳ ಸೆಂಟ್ರಲ್ ಸ್ಕೂಲ್ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರೆ, ಅನುದಾನಿತ ಶಾಲೆಗಳಲ್ಲಿ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 11505 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 11434 (99.38%) ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. ಇವರಲ್ಲಿ 5962 ಬಾಲಕರು ಮತ್ತು 5472 ಬಾಲಕಿಯರು.
ಕಾಞಂಗಾಡು ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 9042 ವಿದ್ಯಾರ್ಥಿಗಳಲ್ಲಿ 9039 (99.97%)ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. 4687 ಬಾಲಕರು ಮತ್ತು 4352 ಬಾಲಕಿಯರು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. ಜಿಲ್ಲೆಯ 79ಸರ್ಕಾರಿ ಮತ್ತು 29 ಅನುದಾನಿತ ಶಾಲೆಗಳು ಶೇ. ನೂರು ಫಲಿತಾಂಶ ದಾಖಲಿಸಿಕೊಂಡಿದೆ.
ವಿದ್ಯಾರ್ಥಿಗಳಿಗೆ ಡಿಸಿ ಅಭಿನಂದನೆ:
ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆ ಶೇ.99.38 ಹಾಗೂ ಕಾಞಂಗಾಡು ಶಿಕ್ಷಣ ಜಿಲ್ಲೆ ಶೇ.99.97 ಫಲಿತಾಂಶ ದಾಖಲಿಸಿಕೊಂಡಿದೆ.
ಕೇರಳದಲ್ಲಿ ಶೇ. 99.69 ಫಲಿತಾಂಶ:
ಕೇರಳ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 99.69ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ. 99.70ಫಲಿತಾಂಶ ದಾಖಲಾಗಿತ್ತು. ಪರೀಕ್ಷೆ ಬರೆದ 4,27,153 ವಿದ್ಯಾರ್ಥಿಗಳಲ್ಲಿ 4,25,563 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ 71831 ಮಂದಿ ಎಲ್ಲಾ ವಿಷಯಗಳಲ್ಲಿ 'ಎ'ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕೋಟ್ಟಯಂ ಜಿಲ್ಲೆ ರಾಜ್ಯದಲ್ಲಿ ಪ್ರಥಮ(ಶೇ. 99.92)ಸ್ಥಾನದಲ್ಲಿದ್ದರೆ, ತಿರುವನಂತಪುರ ಕೊನೇ(ಶೇ. 99.08)ಸ್ಥಾನದಲ್ಲಿದೆ. ಶಿಕ್ಷಣ ಸಚಿವ ಕೆ. ಶಿವನ್ ಕುಟ್ಟಿ ಫಲಿತಾಂಶ ಪ್ರಕಟಿಸಿದರು.