ಅಹಮದಾಬಾದ್: ರಾಜ್‌ಕೋಟ್‌ನ ಮನರಂಜನಾ ಕೇಂದ್ರ 'ಟಿಆರ್‌ಪಿ ಗೇಮ್ ಜೋನ್'ನಲ್ಲಿ ನಡೆದ ಅಗ್ನಿ ಅನಾಹುತದಲ್ಲಿ ಮೃತರಾದವರ ಪೈಕಿ 9 ಮೃತದೇಹಗಳ ಗುರುತನ್ನು ಡಿಎನ್‌ಎ ಪರೀಕ್ಷೆ ಮೂಲಕ ಪತ್ತೆ ಮಾಡಲಾಗಿದೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.

ಮೇ 25ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಮಕ್ಕಳು ಸೇರಿದಂತೆ 27 ಜನ ಸಾವಿಗೀಡಾಗಿದ್ದರು. ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದರಿಂದ, ರಾಜ್ಯ ಸರ್ಕಾರ ಡಿಎನ್‌ಎ ಪರೀಕ್ಷೆ ಮೂಲಕ ಶವಗಳ ಗುರುತು ಪತ್ತೆಗೆ ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, 'ಗಾಂಧಿನಗರದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಡಿಎನ್‌ಎ ಪರೀಕ್ಷೆ ನಡೆಯುತ್ತಿದೆ. ಈವರೆಗೆ 9 ಮೃತ ದೇಹಗಳನ್ನು ಗುರುತಿಸಲಾಗಿದೆ. ಸುಟ್ಟ ದೇಹಗಳಿಂದ ರಕ್ತದ ಮಾದರಿ ಸಂಗ್ರಹಿಸುವುದು ಅಸಾಧ್ಯ. ಹಾಗಾಗಿ ವಿಧಿವಿಜ್ಞಾನ ತಜ್ಞರು ಮೃತರ ಮತ್ತು ಅವರ ಸಂಬಂಧಿಕರ ಡಿಎನ್‌ಎಗೆ ಹೊಂದಿಸಲು ಮೂಳೆ ಮಾದರಿಗಳನ್ನು ಸಂಗ್ರಹಿಸಿದ್ದಾರೆ' ಎಂದು ತಿಳಿಸಿದರು.
ರಸ್ತೆ ಮೂಲಕ ಗಾಂಧಿನಗರಕ್ಕೆ ಮಾದರಿಗಳನ್ನು ತಂದರೆ ಸುಮಾರು ನಾಲ್ಕು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಡಿಎನ್‌ಎ ಪ್ರಕ್ರಿಯೆಯನ್ನು ತ್ವರಿತಗೊಳಿಸಲು, ಏರ್ ಆಂಬ್ಯುಲೆನ್ಸ್ ನಿಯೋಜಿಸಲು ಸಿಎಂ ಆದೇಶಿಸಿದ್ದಾರೆ ಎಂದು ಸಚಿವರು ಹೇಳಿದರು.
ಭಾನುವಾರ ಬೆಳಿಗ್ಗೆಯಿಂದಲೇ ಎಫ್‌ಎಸ್‌ಎಲ್‌ನಲ್ಲಿ ಡಿಎನ್‌ಎ ಪರೀಕ್ಷೆ ಪ್ರಕ್ರಿಯೆ ಪ್ರಾರಂಭವಾಗಿದೆ. 18 ವಿಧಿವಿಜ್ಞಾನ ತಜ್ಞರ ತಂಡ ಹಗಲು-ರಾತ್ರಿ ಕೆಲಸ ಮಾಡುತ್ತಿದೆ. ಮೃತದೇಹಗಳನ್ನು ಗುರುತಿಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.