ನವದೆಹಲಿ: ಭಾರತ್ ಬಯೊಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಕೋವಿಡ್ ತಡೆ ಲಸಿಕೆ ತೆಗೆದುಕೊಂಡ ಮೂರನೇ ಒಂದರಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡಪರಿಣಾಮಗಳು ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕೆಲ ಸಂಶೋಧಕರು ನಡೆಸಿರುವ ಅಧ್ಯಯನಕ್ಕೆ ಬಳಸಿರುವ ವಿಧಾನವು ಅತ್ಯಂತ ಕಳಪೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.
ಈ ಲಸಿಕೆ ಪಡೆದ ಶೇ 30ರಷ್ಟು ಜನರಲ್ಲಿ ವರ್ಷದ ಬಳಿಕ ಪಾರ್ಶ್ವವಾಯು, ನರ ಸಂಬಂಧಿತ ಅಸ್ವಸ್ಥತೆ ಮತ್ತು ಉಸಿರಾಟ ನಾಳ ಸಮಸ್ಯೆ ಸೇರಿದಂತೆ ಹಲವು ಅಡ್ಡ ಪರಿಣಾಮಗಳು ಕಂಡುಬಂದಿವೆ ಎಂದು ಅಧ್ಯಯನದ ವರದಿ ಹೇಳಿತ್ತು.
ಕೋವ್ಯಾಕ್ಸಿನ್ ಸುರಕ್ಷತೆ ವಿಶ್ಲೇಷಣೆ ನಡೆಸಿರುವ ಅಧ್ಯಯನಕ್ಕೂ ಐಸಿಎಂಆರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಐಸಿಎಂಆರ್ ಡಿಜಿ ಡಾ. ರಾಜೀವ್ ಬಹಿ ಹೇಳಿದ್ದಾರೆ.
ಈ ಸಂಬಂಧ ಸಂಶೋಧಕರು ಮತ್ತು ಅಧ್ಯಯನ ಪ್ರಕಟವಾದ ಜರ್ನಲ್ ಸಂಪಾದಕರಿಗೆ ಪತ್ರ ಬರೆದಿರುವ ಬಹಿ, ಅಧ್ಯಯನದ ವರದಿಯಲ್ಲಿ ಐಸಿಎಂಆರ್ ಹೆಸರು ತೆಗೆದು ತಪ್ಪು ಸರಿಪಡಿಸುವಂತೆ ಸೂಚಿಸಿದ್ದಾರೆ.
ಈ ಅಧ್ಯಯನಕ್ಕೆ ಬಳಸಿರುವ ವಿಧಾನವು ಅತ್ಯಂತ ಕಳಪೆಯಾಗಿದೆ ಎಂದು ಹೇಳಿದ್ದಾರೆ.