HEALTH TIPS

ಪಾಕಿಸ್ತಾನ ಗೌರವಿಸುವಂತೆ ಸಲಹೆ : ಕಾಂಗ್ರೆಸ್‌ ಮುಖಂಡ ಅಯ್ಯರ್‌ ಮಾತಿಗೆ BJP ಕಿಡಿ

             ವದೆಹಲಿ: ಪಾಕಿಸ್ತಾನವನ್ನು ಭಾರತ ಗೌರವಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌ ಅವರು ಹೇಳಿದ್ದ ಹಳೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಇದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

               'ಈ ಮೂಲಕ ಕಾಂಗ್ರೆಸ್‌ ಪಕ್ಷವು ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳುತ್ತಿದೆ' ಎಂದು ಬಿಜೆಪಿ ಆರೋಪಿಸಿದೆ.

             ಅಯ್ಯರ್‌ ಅವರ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ.

             'ಬಿಜೆಪಿಯ ಚುನಾವಣಾ ಪ್ರಚಾರವು ಮುಗ್ಗರಿಸುತ್ತಿರುವ ಕಾರಣ, ಅದು ತನ್ನ ಅನುಕೂಲಕ್ಕಾಗಿ ನನ್ನ ಹಳೆ ವಿಡಿಯೊವನ್ನು ಬಳಸಿಕೊಳ್ಳುತ್ತಿದೆ' ಎಂದು ಅಯ್ಯರ್‌ ದೂರಿದ್ದಾರೆ.

              ಕಳೆದ ವರ್ಷ ಬಿಡುಗಡೆ ಆಗಿರುವ ನನ್ನ ಎರಡು ಪುಸ್ತಕಗಳಾದ 'ಮೆಮೊಯಿರ್ಸ್‌ ಆಫ್‌ ಎ ಮೇವರಿಕ್‌' ಮತ್ತು 'ದಿ ರಾಜೀವ್‌ ಐ ನೊ'ಗಳಲ್ಲಿನ ಸಂಬಂಧಿತ ಭಾಗಗಳನ್ನು ಆಸಕ್ತರು ಓದಬಹುದು ಎಂದು ಅಯ್ಯರ್‌ ಹೇಳಿದ್ದಾರೆ.

                 ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಅಯ್ಯರ್‌ ಅವರು ಕೆಲ ತಿಂಗಳ ಹಿಂದೆ ಈ ಕುರಿತು ಹೇಳಿರುವ ಮಾತುಗಳನ್ನು ಸಂಪೂರ್ಣವಾಗಿ ಒಪ್ಪಲು ಆಗುವುದಿಲ್ಲ ಎಂದು ಹೇಳುವ ಮೂಲಕ ಅಂತರ ಕಾಯ್ದುಕೊಂಡಿದೆ.

              'ಅಯ್ಯರ್‌ ಅವರ ಅಭಿಪ್ರಾಯಕ್ಕೆ ಕಾಂಗ್ರೆಸ್‌ನ ಸಹಮತ ಇಲ್ಲ. ಅವರ ಮಾತಿಗೂ, ಪಕ್ಷಕ್ಕೂ ಸಂಬಂಧವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಅವಿವೇಕದ ನಡೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಹಳೆ ವಿಡಿಯೊವನ್ನು ಬಳಸಿಕೊಳ್ಳುತ್ತಿದೆ' ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್‌ ಖೇರಾ 'ಎಕ್ಸ್‌'ನಲ್ಲಿ ಹೇಳಿದ್ದಾರೆ.

ಜೈಶಂಕರ್‌ ವಿಡಿಯೊ ಹಂಚಿಕೊಂಡ ಕಾಂಗ್ರೆಸ್‌:

               'ಹಳೆಯ ವಿಡಿಯೊಗಳನ್ನು ಬಳಸುವುದಾದರೆ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಚೀನಾಗೆ ಹೆದರಿ ಎಂದು ಸಾರ್ವಜನಿಕವಾಗಿ ಭಾರತಕ್ಕೆ ಸಲಹೆ ನೀಡಿದ್ದ ವಿಡಿಯೊ ಇಲ್ಲಿದೆ ನೋಡಿ' ಎಂದು ಖೇರಾ ಅವರು ವಿದೇಶಾಂಗ ಸಚಿವರ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಸಚಿವ ರಾಜೀವ್‌ ಕಿಡಿ:

               'ಭಾರತವು ಪಾಕಿಸ್ತಾನಕ್ಕೆ ಭಯಪಡಬೇಕು ಮತ್ತು ಅದಕ್ಕೆ ಗೌರವ ನೀಡಬೇಕು ಎಂದು ಅಯ್ಯರ್‌ ಅವರು ಬಯಸುತ್ತಿದ್ದಾರೆ. ಆದರೆ, ನವ ಭಾರತವು ಯಾರಿಗೂ ಹೆದರುವುದಿಲ್ಲ. ಅವರ ಹೇಳಿಕೆಗಳು ಕಾಂಗ್ರೆಸ್‌ನ ಉದ್ದೇಶ, ನೀತಿ ಮತ್ತು ಸಿದ್ಧಾಂತಗಳನ್ನು ಎತ್ತಿ ತೋರಿಸಿವೆ' ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಿಡಿಕಾರಿದ್ದಾರೆ.

                ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವು ಪಾಕಿಸ್ತಾನ ಮತ್ತು ಭಯೋತ್ಪಾದನೆಯ ರಕ್ಷಕ ಮತ್ತು ಸಮರ್ಥಕನಾಗಿ ಮಾರ್ಪಟ್ಟಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

              ಕಾಂಗ್ರೆಸ್‌ ನಾಯಕ ಸ್ಯಾಮ್‌ ಪ್ರಿತ್ರೋಡಾ ಅವರು ಇತ್ತೀಚೆಗೆ ಜನಾಂಗೀಯ ಹೇಳಿಕೆಗಳನ್ನು ನೀಡಿದ್ದರು. ಆಗಲೂ ಕಾಂಗ್ರೆಸ್‌ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಈಗಲೂ ಅಯ್ಯರ್‌ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ ಎಂದು ಅವರು ದೂರಿದ್ದಾರೆ.

- ಮಣಿಶಂಕರ್‌ ಅಯ್ಯರ್‌ ಕಾಂಗ್ರೆಸ್‌ ಮುಖಂಡಅದು ಚಳಿಗಾಲದಲ್ಲಿ ನೀಡಿದ ಸಂದರ್ಶನದ ವಿಡಿಯೊ. ಚುನಾವಣೆ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ

ಭಾರತದ ಚುನಾವಣೆಯಲ್ಲಿ ಪಾಕ್‌ ವಿಚಾರ ಏಕೆ:

                  ಪ್ರಿಯಾಂಕಾ ಅಮೇಠಿ (ಉತ್ತರ ಪ್ರದೇಶ ಪಿಟಿಐ): 'ಭಾರತದಲ್ಲಿ ಚುನಾವಣೆಗಳು ನಡೆಯುತ್ತಿರುವಾಗ ಪಾಕಿಸ್ತಾನದ ಬಗ್ಗೆ ಏಕೆ ಚರ್ಚಿಸಲಾಗುತ್ತಿದೆ' ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದರು. ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು 'ಮಣಿಶಂಕರ್‌ ಅಯ್ಯರ್‌ ಅವರು ಈ ಹೇಳಿಕೆಯನ್ನು ಯಾವಾಗ ನೀಡಿದ್ದರು. ಇದು ಹಳೆಯ ಹೇಳಿಕೆಯಾಗಿದ್ದರೆ ಇಂದು ಅದನ್ನು ಏಕೆ ಚರ್ಚಿಸುತ್ತಿದ್ದೇವೆ. ಎರಡನೇಯದಾಗಿ ಚುನಾವಣೆಗಳು ಎಲ್ಲಿ ನಡೆಯುತ್ತಿವೆ? ಭಾರತದಲ್ಲಿಯೋ ಅಥವಾ ಪಾಕಿಸ್ತಾನದಲ್ಲಿಯೋ? ಭಾರತದಲ್ಲಿ ಚುನಾವಣೆ ನಡೆಯುತ್ತಿರುವಾಗ ಇಲ್ಲಿ ಪಾಕಿಸ್ತಾನದ ಬಗ್ಗೆ ಏಕೆ ಚರ್ಚಿಸುತ್ತಿದ್ದೇವೆ' ಎಂದು ಅವರು ಪ್ರಶ್ನಿಸಿದರು. ದೇಶದಲ್ಲಿ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲಿಯೇ ಗರಿಷ್ಠ ಮಟ್ಟ ತಲುಪಿದೆ ಎಂದ ಅವರು ನಿಜವಾದ ಸಮಸ್ಯೆಗಳನ್ನು ಆಧರಿಸಿ ಚುನಾವಣೆಯಲ್ಲಿ ಹೋರಾಡಿ ಎಂದು ಅವರು ಆಡಳಿತ ಪಕ್ಷ ಬಿಜೆಪಿಗೆ ಕರೆ ನೀಡಿದರು. ಬಿಜೆಪಿಯು ಚುನಾವಣೆಯಲ್ಲಿ ಗೆಲ್ಲಲು ಹಿಂದೂ-ಮುಸ್ಲಿಂ ಕುರಿತ ಮಾತುಗಳನ್ನು ಆಡುತ್ತಿದೆ ಎಂದು ಆರೋಪಿಸಿದ ಅವರು ಜನರು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಚುನಾವಣೆಗಳನ್ನು ಎದುರಿಸಲು ಬಯಸುತ್ತಿಲ್ಲ ಎಂದು ಪ್ರತಿಪಾದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries