ಪುರಿ: ಅಲ್ಪಸಂಖ್ಯಾತರ ವಿರುದ್ಧ ತಾನು ಎಂದೂ ಮಾತು ಆಡಿಲ್ಲ, ಬಿಜೆಪಿಯು ಎಂದೂ ಅವರ ವಿರುದ್ಧ ಕೆಲಸ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಆದರೆ, ಯಾವುದೇ ರೀತಿಯ 'ವಿಶೇಷ ಪರಿಗಣನೆ'ಯನ್ನು ತಾನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು, 'ನಾನು ಅಲ್ಪಸಂಖ್ಯಾತರ ವಿರುದ್ಧ ಮಾತನಾಡಿಲ್ಲ. ಕಾಂಗ್ರೆಸ್‌ನ ಮತಬ್ಯಾಂಕ್ ರಾಜಕಾರಣದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷವು ಸಂವಿಧಾನದ ಜಾತ್ಯತೀತ ನಿಲುವನ್ನು ನಿರಂತರವಾಗಿ ಉಲ್ಲಂಘಿಸಿದ್ದು, ಅಲ್ಪಸಂಖ್ಯಾತರನ್ನು ಓಲೈಸಲು ಬಯಸುವ ವಿರೋಧ ಪಕ್ಷಗಳ ಮತ ಬ್ಯಾಂಕ್ ರಾಜಕಾರಣವನ್ನು ನನ್ನ ಚುನಾವಣಾ ಭಾಷಣಗಳ ಮೂಲಕ ಬಯಲಿಗೆಳೆದಿದ್ದೇನೆ' ಎಂದು ತಿಳಿಸಿದರು.
'ನಾನು ಸಂತೃಪ್ತಿಯ ಪಥವನ್ನು ಅನುಸರಿಸುತ್ತೇನೆ. ಅವರದ್ದು ಓಲೈಕೆಯ ಪಥ. ನನ್ನದು 'ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್' ರಾಜಕಾರಣ. ನಾವು 'ಸರ್ವ ಧರ್ಮ ಸಮಭಾವ'ದಲ್ಲಿ ನಂಬಿಕೆ ಹೊಂದಿದ್ದೇನೆ. ನಾವು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುತ್ತೇವೆ. ನಾವು ಯಾರನ್ನೂ ವಿಶೇಷ ಪ್ರಜೆಗಳೆಂದು ಒಪ್ಪಿಕೊಳ್ಳದೇ ಎಲ್ಲರೂ ಸಮಾನರು ಎಂದು ಪರಿಗಣಿಸುತ್ತೇವೆ' ಎಂದು ಪ್ರತಿಪಾದಿಸಿದರು.
'ಕಾಂಗ್ರೆಸ್ ಪಕ್ಷವು ಹಿಂದೂಗಳ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದೆ ಎಂದು ನಿಜವಾಗಿಯೂ ನೀವು ನಂಬಿದ್ದೀರಾ' ಎನ್ನುವ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, 'ಇದು, ನಾನು ಆ ರೀತಿ ಆಲೋಚನೆ ಮಾಡುತ್ತಿರುವ ವಿಚಾರ ಅಲ್ಲ. ಯಾವುದೇ ತರ್ಕವಿಲ್ಲದೆ ಪ್ರಚಾರ ಮಾಡುವುದು ಪಾಪಕೃತ್ಯ. ನಾನು ಅಂತಹ ಪಾಪವನ್ನು ಎಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಅಂಥ ಅತಾರ್ಕಿಕವಾದ ಪ್ರಚಾರ ಮಾಡಿದ್ದು ಅವರು (ವಿರೋಧ ಪಕ್ಷ)' ಎಂದು ಅಭಿಪ್ರಾಯಪಟ್ಟರು.
'ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾದ ದಿನವೇ ನಾನು ಅದು ಮುಸ್ಲಿಂ ಲೀಗ್ ಪ್ರತಿರೂಪವಾಗಿದೆ ಎಂದು ಹೇಳಿದ್ದೆ. ಅದು ತಪ್ಪು ಎನ್ನುವುದಾದರೆ, ಕಾಂಗ್ರೆಸ್ ಅಂದೇ 'ಮೋದಿಜೀ ಇದು ಸರಿ ಅಲ್ಲ' ಎಂದು ಹೇಳಬೇಕಾಗಿತ್ತು. ಆದರೆ, ಅವರು ಮೌನ ವಹಿಸಿದ್ದರು. ಭಾರತದ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ನನ್ನ ಕೆಲಸ ಎಂದು ಹಾಗೆ ಮಾಡುತ್ತಾ ಬಂದೆ' ಎಂದು ತಿಳಿಸಿದರು.
'ಟೆಂಡರ್‌ಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಈಗ, ನೀವು ಒಂದು ಸೇತುವೆ ನಿರ್ಮಿಸಬೇಕು. ಅದಕ್ಕೆ ಯಾರು ಅರ್ಜಿ ಸಲ್ಲಿಸುತ್ತಾರೆ? ಸಂಪನ್ಮೂಲ, ಪರಿಣತಿ, ತಾಂತ್ರಿಕತೆ ಇರುವವರು. ಆದರೆ, ನೀವು ಅಲ್ಲಿಯೂ ಮೀಸಲಾತಿ ತಂದರೆ, ನನ್ನ ದೇಶದ ಅಭಿವೃದ್ಧಿಯ ಕಥೆ ಏನಾಗಬೇಡ' ಎಂದು ಪ್ರಶ್ನಿಸಿದರು.
ಪ್ರಧಾನಿ ಮಾತು..
ನವೀನ್ ಪಟ್ನಾಯಕ್ ಸರ್ಕಾರದಲ್ಲಿ ಪುರಿ ಜಗನ್ನಾಥನಿಗೂ ರಕ್ಷಣೆ ಇಲ್ಲ. ಕಳೆದ ಆರು ವರ್ಷಗಳಿಂದ ಜಗನ್ನಾಥ ರತ್ನ ಭಂಡಾರದ (ಖಜಾನೆ) ಬೀಗ ಕಣ್ಮರೆಯಾಗಿದೆ. ಮುಖ್ಯಮಂತ್ರಿಗಳನ್ನು ಸುತ್ತುವರಿದಿರುವ ಕೂಟವೇ ಇದಕ್ಕೆಲ್ಲ ಕಾರಣ.
ಕಾಂಗ್ರೆಸ್ 'ಶಹಜಾದ'ನನ್ನು ಬೆಂಬಲಿಸುವ ಮೂಲಕ ಪಾಕಿಸ್ತಾನದ ರಾಜಕಾರಣಿಗಳು ಭಾರತದ ಚುನಾವಣಾ ಚರ್ಚೆಯಲ್ಲಿ ಪ್ರವೇಶ ಪಡೆದಿದ್ದಾರೆ. ಅವರ ಹೇಳಿಕೆಗಳಿಂದ ತಮಗೆ ಅನುಕೂಲವಾಗುತ್ತೆ ಎಂದು ಕಾಂಗ್ರೆಸ್ ಭಾವಿಸಿದೆ. ಅವರು ವಾಸ್ತವದಿಂದ ದೂರ ಇದ್ದಾರೆ. ಕಾಂಗ್ರೆಸ್, ಪಾಕಿಸ್ತಾನಕ್ಕಾಗಿ ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿ ಕೊಟ್ಟಿದೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಒಂದು ರಾಷ್ಟ್ರ, ಒಂದು ಚುನಾವಣೆ, ಯುಸಿಸಿ ಸೇರಿದಂತೆ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳನ್ನು ಈಡೇರಿಸುತ್ತೇವೆ.
ಮುಂದಿನ ಸರ್ಕಾರದಲ್ಲಿ ಮೊದಲ ನೂರು ದಿನಗಳ ಕಾರ್ಯ ಯೋಜನೆಯನ್ನು ಸಿದ್ಧಪಡಿಸಲು ಎಲ್ಲ ಮಂತ್ರಿಗಳಿಗೆ ಸೂಚಿಸಿದ್ದೇನೆ.
'250 ಜೊತೆ ಬಟ್ಟೆಯ ಆರೋಪ'
'ನಾನು ನನ್ನ ರಾಜಕೀಯ ಜೀವನದಲ್ಲಿ ಎದುರಿಸಿದ ಅತಿ ದೊಡ್ಡ ಆರೋಪ ಎಂದರೆ 250 ಜೊತೆ ಬಟ್ಟೆ ಹೊಂದಿದ್ದೇನೆ ಎನ್ನುವುದು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂದರ್ಶನದಲ್ಲಿ ಈ ವಿಚಾರ ತಿಳಿಸಿದ ಪ್ರಧಾನಿ 'ಕಾಂಗ್ರೆಸ್ ಮುಖಂಡ ಗುಜರಾತ್ ಮಾಜಿ ಮುಖ್ಯಮಂತ್ರಿ ಅಮರ್‌ಸಿಂಗ್ ಚೌಧರಿ ಈ ಆರೋಪ ಮಾಡಿದ್ದರು. ₹250 ಕೋಟಿ ಕದ್ದ ಮುಖ್ಯಮಂತ್ರಿ ಬೇಕೋ 250 ಜೊತೆ ಬಟ್ಟೆ ಇರುವ ಮುಖ್ಯಮಂತ್ರಿ ಬೇಕೋ ಎಂದು ನಾನು ಜನರನ್ನು ಪ್ರಶ್ನಿಸಿದ್ದೆ. ಜನ 250 ಜೊತೆ ಬಟ್ಟೆ ಇರುವವರು ಬೇಕು ಎಂದು ಉತ್ತರಿಸಿದ್ದರು' ಎಂದರು.
'ಆರೋಪದಲ್ಲಿ ಸತ್ಯ ಇದೆ. ಆದರೆ ಸಂಖ್ಯೆ ತಪ್ಪಾಗಿದೆ ಎಂದು ನಾನು ಹೇಳಿದ್ದೆ. ಈ ಸಂಖ್ಯೆಯಲ್ಲಿ (250) ಒಂದೋ ಸೊನ್ನೆ (0) ತಪ್ಪಾಗಿದೆ ಇಲ್ಲವೇ ಮೊದಲ ಅಂಕಿ (2) ತಪ್ಪಾಗಿದೆ ಎಂದಿದ್ದೆ' ಎಂದು ವಿವರಿಸಿದರು.