ನವದೆಹಲಿ: ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರನ್ನು ಇಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವದೆಹಲಿ: ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರನ್ನು ಇಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
'ಕಪಾಳಕ್ಕೆ ಹಲವು ಬಾರಿ ಹೊಡೆದು, ಕಾಲಿನಿಂದ ಒದ್ದು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ' ಎಂದು ಬಿಭವ್ ಕುಮಾರ್ ವಿರುದ್ಧ ಮಾಲಿವಾಲ್ ದೂರು ನೀಡಿದ್ದರು.
ಈ ಸಂಬಂಧ ದೆಹಲಿ ಪೊಲೀಸರು ಗುರುವಾರವೇ ಎಫ್‌ಐಆರ್ ದಾಖಲಿಸಿದ್ದು, ಬಿಭವ್ ಕುಮಾರ್ ಅವರನ್ನು ಆರೋಪಿ ಎಂದು ಉಲ್ಲೇಖಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನ್ಯಾಯಾಧೀಶರ ಎದುರು ಮಾಲಿವಾಲ್ ಹೇಳಿಕೆ ನೀಡಿದ್ದರು.
ಪ್ರಕರಣವೇನು?
ಮೇ 13ರಂದು ದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ತೆರಳಿದ್ದ ಸ್ವಾತಿ ಮಾಲಿವಾಲ್, ಕೇಜ್ರಿವಾಲ್ ಅವರ ಮನೆಯಲ್ಲಿ ಅವರ ಆಪ್ತ ಸಿಬ್ಬಂದಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದರು.
'ನನ್ನ ಎದೆ, ಹೊಟ್ಟೆ ಮತ್ತು ದೇಹದ ಕೆಳಭಾಗಕ್ಕೆ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್ ಒದ್ದಿದ್ದಾನೆ.ನನ್ನ ಮೇಲೆ ಸಂಪೂರ್ಣ ಬಲ ಬಳಸಿ ಹಲ್ಲೆ ನಡೆಸಿದ್ದಾನೆ. ಏಳೆಂಟು ಬಾರಿ ಕಪಾಳಕ್ಕೆ ಹೊಡೆದಿದ್ದಾನೆ' ಎಂದು ಮಾಲಿವಾಲ್ ದೂರಿನಲ್ಲಿ ತಿಳಿಸಿದ್ದರು.
ಈ ಆರೋಪವನ್ನು ತಳ್ಳಿಹಾಕಿರುವ ಬಿಭವ್ ಕುಮಾರ್, 'ಮುಖ್ಯಮಂತ್ರಿಗಳ ನಿವಾಸವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಅವರನ್ನು ತಡೆಯಲು ನಾನು ಯತ್ನಿಸಿದ್ದಾಗ, ಗದ್ದಲ ಮಾಡಿದ್ದಲ್ಲದೇ ನನ್ನನ್ನು ನಿಂದಿಸಿದ್ದರು' ಎಂದು ಪ್ರತಿ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ನಿವಾಸದ ಸಿಸಿಟಿವಿ ದೃಶ್ಯಗಳನ್ನು ಎಎಪಿ ಬಿಡುಗಡೆ ಮಾಡಿದೆ. ಮಾಲಿವಾಲ್ ಮೇಲೆ ಭ್ರಷ್ಟಾಚಾರದ ಆರೋಪವಿದ್ದು, ಕೇಜ್ರಿವಾಲ್ ವಿರುದ್ಧ ಸಂಚು ರೂಪಿಸಲು ಬಿಜೆಪಿ ಅವರಿಗೆ ಬೆದರಿಕೆ ಹಾಕಿದೆ ಎಂದು ಆರೋಪಿಸಿದೆ.