ಬಾರಿಪದಾ: ಒಡಿಶಾದ ಬಾರಿಪದಾ ಪಟ್ಟಣದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ತೊಡಗಿದ್ದ ಮೋದಿ, ಬಿಸಿಲಿನ ಝಳದಿಂದ ಮೂರ್ಛೆಹೋದ ಯುವಕನೊಬ್ಬನಿಗೆ ತನ್ನ ವೈಯಕ್ತಿಕ ವೈದ್ಯಕೀಯ ತಂಡದಿಂದ ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.
ಬಾರಿಪದಾ: ಒಡಿಶಾದ ಬಾರಿಪದಾ ಪಟ್ಟಣದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ತೊಡಗಿದ್ದ ಮೋದಿ, ಬಿಸಿಲಿನ ಝಳದಿಂದ ಮೂರ್ಛೆಹೋದ ಯುವಕನೊಬ್ಬನಿಗೆ ತನ್ನ ವೈಯಕ್ತಿಕ ವೈದ್ಯಕೀಯ ತಂಡದಿಂದ ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.
ಮೂರ್ಛೆಹೋದ ಯುವಕನನ್ನು ಟಿ.ವಿ ಪತ್ರಿಕೋದ್ಯಮಿ ದೋಲಾಗೋವಿಂದ ಬಾರಿಕ್ ಎಂದು ಗುರುತಿಸಲಾಗಿದ್ದು, ಬಳಿಕ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬಾರಿಪದಾದಲ್ಲಿ ಗರಿಷ್ಠ ತಾಪಮಾನ ಬುಧವಾರ 39.5 ಡಿಗ್ರಿ ಸೆಲ್ಸಿಯಸ್ ಇತ್ತು. ಆರ್ದ್ರತೆ ಶೇಕಡ 83ರಷ್ಟಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯುವಕ ಮೂರ್ಛೆ ಹೋಗಿದ್ದನ್ನು ಗಮನಿಸಿದ ಮೋದಿ, ಕೂಡಲೇ ಭಾಷಣ ನಿಲ್ಲಿಸಿ, ಆತನಿಗೆ ಗಾಳಿ ಬರಲು ಅವಕಾಶ ಮಾಡಿಕೊಡುವಂತೆ ಕೋರಿದರು. ಬಳಿಕ, ತಮ್ಮ ವೈದ್ಯರ ತಂಡವನ್ನು ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ಬಳಿಕ, ಜಿಲ್ಲಾಸ್ಪತ್ರೆಯಲ್ಲಿ ಬಿಸಿಗಾಳಿಯಿಂದ ನಿತ್ರಾಣಗೊಂಡ ಜನರಿಗಾಗಿಯೇ ವ್ಯವಸ್ಥೆ ಮಾಡಿರುವ ವಿಶೇಷ ವಾರ್ಡ್‌ನಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ.
ಪ್ರಧಾನಿ ಮೋದಿಯವರ ಸಹಾಯಕ್ಕೆ ಯುವಕ ಧನ್ಯವಾದ ಹೇಳಿದ್ದಾನೆ.
'ಇದ್ದಕ್ಕಿದ್ದಂತೆ ಕಣ್ಣು ಮಂಜಾಯಿತು. ಮೂರ್ಛೆಹೋದೆ. ಪ್ರಧಾನಿ, ನನಗೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಹೇಳಿದ್ದನ್ನು ನಾನು ಕೇಳಿಸಿಕೊಂಡಿಲ್ಲ. ಪ್ರಜ್ಞೆ ಬಂದ ಬಳಿಕ ನನ್ನ ಆರೋಗ್ಯದ ಬಗ್ಗೆ ಮೋದಿಜೀ ವಹಿಸಿದ ಕಾಳಜಿ ಬಗ್ಗೆ ಜನ ಹೇಳಿದರು' ಎಂದು ಯುವಕ ಹೇಳಿದ್ದಾನೆ.