ಕಾಸರಗೋಡು : ಜಿಲ್ಲೆಯಲ್ಲಿ ಬೇಸಿಗೆಯ ತಾಪ ಹೆಚ್ಚುತ್ತಿದ್ದು, ಬಿಸಿಲಿನ ಬೇಗೆಯಿಂದಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ ರಾಮದಾಸ್ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣ, ಕೃಷಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಮತ್ತು ಇತರ ಯಾವುದೇ ಶ್ರಮದಾಯಕ ಕೆಲಸದ ವೇಳಾಪಟ್ಟಿಯಲ್ಲಿ ಕೆಲಸ ಮಾಡುವವರು ತಮ್ಮ ಕೆಲಸದಲ್ಲಿ ಸಾಕಷ್ಟು ವಿಶ್ರಾಂತಿಯನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಮಧ್ಯಾಹ್ನದ ಬಿಸಿಲಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು ಹಾಗೂ ಇತರೆ ಸಾಕು ಪ್ರಾಣಿಗಳನ್ನು ಬಿಸಿಲಿನಲ್ಲಿ ಕಟ್ಟಿ ಹಾಕಬಾರದು. ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೀರು ಲಭ್ಯವಗುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು, ನಿಲುಗಡೆಗೊಳಿಸಿದ ವಾಹನದೊಳಗೆ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡದಿರುವಂತೆಯೂ ಸೂಚಿಸಲಾಗಿದೆ.
ನೀರು ಪೋಲಾಗದಂತೆ ನೋಡಿಕೊಳ್ಳುವುದರ ಜತೆಗೆ, ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಹರಿದುಹೋಗದಂತೆ ಗರಿಷ್ಠ ನೀರು ಸಂಗ್ರಹಿಸಿ ಭೂಮಿಯೊಳಗೆ ಇಂಗುವಂತೆ ಕ್ರಮಕೈಗೊಳ್ಳಬೇಕು. ನಿರ್ಜಲೀಕರಣವನ್ನು ತಡೆಗಟ್ಟಲು ಯಾವಾಗಲೂ ಕುಡಿಯುವ ನೀರಿನ ಬಾಟಲಿ ಜತೆಗಿರಿಸಿಕೊಳ್ಳಬೇಕು, ಅಸೌಖ್ಯ ಕಾಣಿಸಿಕೊಂಡ ತಕ್ಷಣ ವಿಶ್ರಾಂತಿ ಪಡೆಯುವುದರ ಜತೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು, ಹವಾಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕೃತ ಎಚ್ಚರಿಕೆಗಳನ್ನು ಗಮನಿಸಿ ಮತ್ತು ಪಾಲಿಸುವಂತೆಯೂ ಸೂಚನೆ ನೀಡಲಾಗಿದೆ.