ಕಾಸರಗೋಡು: ಜಿಲ್ಲೆಯ ವಿವಿಧೆಡೆ ಹಳದಿ ಕಾಮಾಲೆ(ಹೆಪಟೈಟಿಸ್-ಎ)ಕಾಯಿಲೆ ಕಾಣಿಸಿಕೊಂಡಿದ್ದು, 2024ರ ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಐವತ್ತಕ್ಕೂ ಹೆಚ್ಚು ಮಂದಿಯಲ್ಲಿ ಹಳದಿಕಾಮಾಲೆ ಕಾಯಿಲೆ ದೃಢಪಟ್ಟಿದೆ. ಜ್ವರ ಬಾಧಿಸಿ ಚಿಕಿತ್ಸೆ ಪಡೆದವರ ಸಂಖ್ಯೆ 80ಕ್ಕೂ ಹೆಚ್ಚಾಗಿದೆ.
ಮೊಗ್ರಾಲ್‍ಪುತ್ತೂರು ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಳದಿಕಾಮಾಲೆ ರೋಗ ಪತ್ತೆಯಾಗಿದ್ದು, ಇಲ್ಲಿನ ಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಮಾರ್ಚ್ ತಿಂಗಳಲ್ಲಿ ಅತಿಹೆಚ್ಚು ಮಂದಿಗೆ ಹಳದಿ ಕಾಮಾಲೆ ಜ್ವರ ಬಾಧಿಸಿದ್ದು, ಇವರಲ್ಲಿ 24ಮಂದಿಯಲ್ಲಿ ಕಾಯಿಲೆ ದೃಢಪಟ್ಟಿದೆ. ಜನವರಿಯಲ್ಲಿ 18, ಫೆಬ್ರವರಿಯಲ್ಲಿ 5, ಏಪ್ರಿಲ್ ತಿಂಗಳಲ್ಲಿ 11ಮಂದಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಮಲಿನ ಜಲ ಮತ್ತು ಆಹಾರದ ಮೂಲಕ ಹಳದಿ ಕಾಮಾಲೆ ಹರಡುತ್ತಿದೆ. ಕಾಯಿಲೆ ಬಾಧಿಸಿದವರ ಕನ್ಣಲ್ಲಿ ಹಾಗೂ ಮೂತ್ರದಲ್ಲೂ ಹಳದಿ ಬಣ್ಣ ಗೋಚರಿಸುವುದು. ಜತೆಗೆ ದೈಹಿಕ ಅಸ್ವಖ್ಯ ಕಂಡುಬರುವುದು ಪ್ರಾಥಮಿಕ ಲಕ್ಷಣವಾಗಿದೆ. ಇದರೊಮದಿಗೆ ವಾಂತಿ, ಉದರ ನೋವು, ತಲೆನೋವು, ಸ್ನಾಯು ನೋವು ಅನುಭವಕ್ಕೆ ಬರುತ್ತದೆ. ಇಂತಹ ಲಕ್ಷಣ ಕಂಡುಬಂದಲ್ಲಿ ಜನರು ತಕ್ಷಣ ಚಿಕಿತ್ಸೆ ಪಡೆಯುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.