ಬದಿಯಡ್ಕ: ಮೂಕಪ್ರಾಣಿಗಳ ಸೇವೆಯನ್ನು ಮಾಡಲು ಸರ್ಕಾರದಿಂದ ಸಿಗುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಇಪ್ಪತ್ತೊಂದು ವರ್ಷಗಳ ಕಾಲ ಒಂದೇ ಕಡೆಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಿ ಬದಿಯಡ್ಕದ ಜನರ ಪ್ರೀತಿಯನ್ನು ಸಂಪಾದಿಸಿರುವುದು ಸ್ತುತ್ಯರ್ಹವಾಗಿದೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು.
ಬದಿಯಡ್ಕ ಮೃಗಾಸ್ಪತ್ರೆಯಲ್ಲಿ 21 ವರ್ಷಗಳ ಕಾಲ ಲೈವ್‍ಸ್ಟೋಕ್ ಇನ್ಸ್‍ಪೆಕ್ಟರ್ ಆಗಿ ತನ್ನ ಕರ್ತವ್ಯವನ್ನು ನಿರ್ವಹಿಸಿ ಇದೀಗ ನಿವೃತ್ತರಾಗುತ್ತಿರುವ ಸುಪ್ರಭ ಅವರನ್ನು ಮಂಗಳವಾರ ಬದಿಯಡ್ಕ ಮೃಗಾಸ್ಪತ್ರೆಯಲ್ಲಿ ಜರಗಿದ ಸಮಾರಂಭದಲ್ಲಿ ಗೌರವಿಸಿ ಅವರು ಮಾತನಾಡಿದರು.
ಒಂದು ಊರಿನ ಜನರ ಪ್ರೀತಿಯನ್ನು ಸಂಪಾದಿಸುವುದು ಸುಲಭದ ಮಾತಲ್ಲ. ಇಂದು ಇಲ್ಲಿ ಸೇರಿದ ಊರಿನ ಜನರೇ ಇದಕ್ಕೆ ಸಾಕ್ಷಿ ಎಂದರು.
ಬದಿಯಡ್ಕ ಗ್ರಾಮಪಂಚಾಯಿತಿ ಉಪಾ|ಧ್ಯಕ್ಷ ಎಂ.ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಶ್ಯಾಮಪ್ರಸಾದ ಮಾನ್ಯ, ಸಾಮಾಜಿಕ ಕಾರ್ಯಕರ್ತ ಮಾಹಿನ್ ಕೇಳೋಟ್, ಎಂ.ಎಚ್. ಜನಾರ್ಧನ, ಜಿಲ್ಲಾ ಅಧಿಕಾರಿಗಳಾದ ಮನೋಜ್ ಕುಮಾರ್, ಬಾಲಚಂದ್ರನ್ ಶುಭಾಶಂಸನೆಗೈದರು. ಡಾ. ಚಂದ್ರಬಾಬು ಕಾರ್ಯಕ್ರಮ ನಿರೂಪಿಸಿದರು. ಡಾ. ಅನುಗ್ರಹ್ ಸ್ವಾಗತಿಸಿ, ಫೀಲ್ಡ್ ಆಫೀಸರ್ ಸುನಿಲ್ ಕುಮಾರ್ ವಂದಿಸಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ., ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಸೌಮ್ಯಾ ಮಹೇಶ್, ಡಿ.ಶಂಕರ, ರವಿಕುಮಾರ್ ರೈ ಹಾಗೂ ಸದಸ್ಯರು ಸುಪ್ರಭಾ ಅವರಿಗೆ ಸ್ಮರಣಿಕೆಯನ್ನು ನೀಡಿದರು. ವಿವಿಧ ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು, ಬದಿಯಡ್ಕ ಮೃಗಾಸ್ಪತ್ರೆಯ ಸಹೋದ್ಯೋಗಿಗಳು, ಹಿತೈಷಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸುಪ್ರಭಾ ಎಂ. ಅವರು ಮಾತನಾಡಿ, ತನ್ನ ಅನುಭವಗಳನ್ನು ಹಂಚಿಕೊಂಡರು.