ಮುಂಬೈ: 'ದೇಶದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಅವಧಿಯ ಪ್ರಮಾದಗಳಿಗೂ ಕಾಂಗ್ರೆಸ್ ಪಕ್ಷ ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೊಣೆ ಮಾಡುತ್ತಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಟೀಕಿಸಿದ್ದಾರೆ.
ಮುಂಬೈ: 'ದೇಶದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಅವಧಿಯ ಪ್ರಮಾದಗಳಿಗೂ ಕಾಂಗ್ರೆಸ್ ಪಕ್ಷ ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೊಣೆ ಮಾಡುತ್ತಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಟೀಕಿಸಿದ್ದಾರೆ.
ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾದ ಅತಿಕ್ರಮಣ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ ಅವರು ಈ ಮಾತು ಹೇಳಿದರು.
'ಅರುಣಾಚಲ ಪ್ರದೇಶದ ವ್ಯಾಪ್ತಿಯಲ್ಲಿ ಭಾರತದ ನೆಲವನ್ನು ಚೀನಾ 1958 ಮತ್ತು 1962ರ ನಡುವಿನ ಅವಧಿಯಲ್ಲಿಯೇ ಅತಿಕ್ರಮಿಸಿದೆ. ಕೆಲವೊಂದು ಭೂಮಿಯನ್ನು 1958ಕ್ಕೂ ಮೊದಲೇ ಅತಿಕ್ರಮಿಸಿದೆ' ಎಂದೂ ಅವರು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿರುದ್ಧ ಹರಿಹಾಯ್ದ ಅವರು, 'ನಮ್ಮ ಪಡೆಗಳನ್ನೇ ಟೀಕಿಸುವುದು ಸರಿಯಲ್ಲ. 1962ರಲ್ಲೇ ಭೂಮಿ ಕಳೆದುಕೊಂಡಿದ್ದೇವೆ. ಚೀನಾ ಭೂಮಿ ಕಬಳಿಸಿದೆ ಎಂದು ಮತ್ತೆ, ಮತ್ತೆ ಹೇಳುವುದು ದೇಶವನ್ನು ತಪ್ಪುದಾರಿಗೆ ಎಳೆಯುವ ಯತ್ನವಾಗಿದೆ' ಎಂದರು.
'ಗಡಿ ಭಾಗದದಲ್ಲಿ ಚೀನಾ ಹಳ್ಳಿಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆ ಸ್ಥಳವು ವಾಸ್ತವ ಗಡಿರೇಖೆಗೆ ಹತ್ತಿರವಿರುವ ಲೊಂಗ್‌ಜು ಆಗಿದೆ. ಇದನ್ನು 1959ರಲ್ಲೇ ಚೀನಾ ಅತಿಕ್ರಮಣ ಮಾಡಿತ್ತು. ನೀವು ಒಮ್ಮೆ ಗೂಗಲ್ ನಕ್ಷೆಯಲ್ಲಿ ಗಮನಿಸಿ ಹಾಗೂ ಆ ಗ್ರಾಮದ ವ್ಯಾಪ್ತಿಯನ್ನು ನೆಹರೂ ಅವರು 1959ರಲ್ಲಿ ಸಂಸತ್ತಿನಲ್ಲಿ ಏನು ಹೇಳಿದ್ದರೋ ಅದಕ್ಕೆ ಸಮೀಕರಿಸಿ' ಎಂದು ಸಲಹೆ ಮಾಡಿದರು.
'ಕಾಂಗ್ರೆಸ್ ನಾಯಕ ರಾಹುಲ್‌ಗಾಂದಿ ಮತ್ತು ಅವರ ಪಕ್ಷದವರು, ಚೀನಾವು ಲಡಾಖ್‌ನ ಪಾಂಗಾಂಗ್‌ನಲ್ಲಿ ನಿರ್ಮಿಸಿರುವ ಸೇತುವೆ ಬಗ್ಗೆ ಹೇಳುತ್ತಾರೆ. ಚೀನಾ 1958ರಲ್ಲಿ ಪ್ರವೇಶಿಸಿದ ಹಾಗೂ ಮತ್ತೆ 1962ರಲ್ಲಿ ಸ್ವಾಧೀನ ಪಡೆದ ಪ್ರದೇಶ ಅದಾಗಿದೆ' ಎಂದು ಪ್ರತಿಪಾದಿಸಿದರು.