ಬದಿಯಡ್ಕ: ಬೇಸಿಗೆ ಮಳೆ ಮುಂದುವರಿಯುತ್ತಿದ್ದು, ಕಾಸರಗೋಡು ಸೇರಿದಂತೆ ಕೇರಳಾದ್ಯಂತ ಇನ್ನೂ ಮೂರು ದಇವಸಗಳ ಕಾಲ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಸೂಚಿನೆ ನೀಡಿದೆ. ಕಾಸರಗೋಡು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಮೇ 25ರ ರಾತ್ರಿಯಿಂದ ಬಿರುಸಿನ ಮಳೆಯಾಗುವ ಬಗ್ಗೆಯೂ ಮಾಹಿತಿ ನೀಡಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆಯೂ ಕೇಂದ್ರ ಹವಾಮಾಣ ಇಲಾಖೆ ಸೂಚನೆ ನೀಡಿದೆ.
ಅಪರ ಹಾನಿ:
ಗುರುವಾರ ರಾತ್ರಿ ಬಿರುಸಿನ ಗಾಳಿಯೊಂದಿಗೆ ಸುರಿದ ಮಳೆಗೆ ಬದಿಯಡ್ಕ ಆಸುಪಾಸು ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ. ನೀರ್ಚಾಲು ಸನಿಹದ ದೇವರಮೆಟ್ಟು ಎಂಬಲ್ಲಿ ಒಂದು ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಇತರ ಎರಡು ಕಂಬಗಳು ಅಪಾಯಕರ ರೀತಿಯಲ್ಲಿ ವಾಲಿ ನಿಂತಿದೆ. ವಿದ್ಯುತ್ ಇಲಾಖೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ವಿಚ್ಛೇದಿಸಿ, ದುರಸ್ತಿ ಕಾರ್ಯ ನಡೆಸಿದರು. ಹೊಸಂಗಡಿ-ಆನೆಕಲ್ಲು ರಸ್ತೆಯ ಕಡಂಬಾರಿನಲ್ಲಿ ಬೃಹತ್ ಮರ ಬುಡಸಹಿತ ಮಗುಚಿ ರಸ್ತೆಗೆ ಬಿದ್ದು, ವಿದ್ಯುತ್ ತಂತಿ ಕಡಿದು ಬಿದ್ದಿದೆ. ತಕ್ಷಣ ವಿದ್ಯುತ್ ಇಲಾಖೆ ಅಧಿಕಾರಿಗಳು ಸಂಪರ್ಕ ವಿಚ್ಛೇದಿಸಿ ಸಂಭಾವ್ಯ ದುರಂತ ತಪ್ಪಿಸಿದ್ದಾರೆ. ಅಲ್ಪ ಕಾಲ ಸಂಚಾರ ಮೊಟಕುಗೊಂಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.