ಕೋಲ್ಕತಾ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು, ಪ್ರಕರಣ ಸಂಬಂಧ ಪೊಲೀಸರು ಸಮನ್ಸ್ ನೀಡಿದರೆ ಅದನ್ನು ನಿರ್ಲಕ್ಷಿಸುವಂತೆ ರಾಜಭವನ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯಪಾಲರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡಲು ಬರುವುದಿಲ್ಲ ಎಂದು ಬೋಸ್ ಅವರು ತಮ್ಮ ಸಿಬ್ಬಂದಿಗೆ ಹೇಳಿದ್ದಾರೆ.
ಈ ಕುರಿತು ತಮ್ಮ ಸಿಬ್ಬಂದಿಗೆ ಪತ್ರ ಬರೆದಿರುವ ಬೋಸ್, “ಪ್ರಕರಣದ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದು, ಅವರು ರಾಜಭವನದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ತನಿಖಾ ತಂಡವು ರಾಜಭವನದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲು ಉದ್ದೇಶಿಸಿದೆ ಎಂದು ವರದಿಯಾಗಿರುವುದಾಗಿ ತಿಳಿಸಿದ್ದಾರೆ.
ಆದರೆ ಸಂವಿಧಾನದ 361ನೇ ವಿಧಿಯಡಿ ರಾಜ್ಯಪಾಲರು ಹುದ್ದೆಯಲ್ಲಿರುವ ವೇಳೆ ಅವರ ವಿರುದ್ಧ ಯಾವುದೇ ಅಪರಾಧ ವಿಚಾರಣಾ ಪ್ರಕ್ರಿಯೆ (ಕ್ರಿಮಿನಲ್ ಪ್ರೊಸಿಡಿಂಗ್ಸ್ ) ನಡೆಸದಂತೆ ವಿನಾಯಿತಿ ಇರುವುದರಿಂದ ಪೊಲೀಸರು ವಿಚಾರಣೆ ನಡೆಸಬಹುದೇ ಮತ್ತು ಸಾಕ್ಷ್ಯವನ್ನು ಸಂಗ್ರಹಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜಭವನದ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ನಲ್ಲಿ, ಪ್ರಸ್ತುತ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಆನ್‌ಲೈನ್, ಆಫ್‌ಲೈನ್, ವೈಯಕ್ತಿಕವಾಗಿ, ಫೋನ್ ಮೂಲಕ ಅಥವಾ ಯಾವುದೇ ಇತರ ವಿಧಾನಗಳ ಮೂಲಕ ಯಾವುದೇ ಹೇಳಿಕೆ ನೀಡದಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.
2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಯೊಬ್ಬರು ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ರಾಜ್ಯಪಾಲರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಮಾಡಲು ಪಶ್ಚಿಮ ಬಂಗಾಳ ಪೊಲೀಸರು ವಿಶೇಷ ತನಿಖಾ ತಂಡವನ್ನು(ಎಸ್‌ಇಟಿ) ರಚಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.