ಕೋಲ್ಕತ್ತ: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಲ್ಲಿ ಹಿರಿಯ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿರುವ ರಾಜ್ಯಪಾಲ ಸಿ.ವಿ. ಆನಂದ ಬೋಸ್, ರಾಜ್ಯ ಸರ್ಕಾರ ಪ್ರಾಯೋಜಿತ ಹಿಂಸಾಚಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ರಾಜ್ಯ ಸರ್ಕಾರದ ಕಾರ್ಯಾಲಯಕ್ಕೆ ಪತ್ರ ರವಾನಿಸಲಾಗಿದ್ದು, ಸರ್ಕಾರ ತೆಗೆದುಕೊಂಡ ಕ್ರಮದ ಕುರಿತು ವರದಿಯನ್ನು ಸಲ್ಲಿಸುವಂತೆಯೂ ಸಿಎಂಗೆ ಸೂಚಿಸಲಾಗಿದೆ.
'ರಕ್ತಪಾತ' ಕೊನೆಗೊಳಿಸಲು ಮಮತಾ ಅವರಿಗೆ ಎಚ್ಚರಿಸಿರುವ ಬೋಸ್, ಮಾದರಿ ನೀತಿ ಸಂಹಿತೆಯ (ಎಂಸಿಸಿ) ಪರಿಧಿಯೊಳಗೆ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಸಂವಿಧಾನ ಆಶಯದ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಬುಧವಾರ ರಾತ್ರಿ ನಂದಿಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಿಜೆಪಿ ಕಾರ್ಯಕರ್ತೆ ರತಿಬಾಲ ಅರಹಿ ಹತ್ಯೆಗೀಡಾಗಿದ್ದರು. ದುಷ್ಕರ್ಮಿಗಳ ದಾಳಿಗೆ ರತಿಬಾಲ ಅವರ ಪುತ್ರ ಸಂಜಯ್ ಹಾಗೂ ಇತರೆ ಏಳು ಮಂದಿ ಗಾಯಗೊಂಡಿದ್ದರು.
ಘಟನೆ ಖಂಡಿಸಿ ಬಿಜೆಪಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿತ್ತು. ರಸ್ತೆಗಳನ್ನು ತಡೆದು, ಟೈರ್‌ಗಳನ್ನು ಸುಟ್ಟು, ಅಂಗಡಿಗಳನ್ನು ಬಂದ್ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಕಾರ್ಯಕರ್ತೆಯ ಹತ್ಯೆಯಲ್ಲಿ ಟಿಎಂಸಿ ಬೆಂಬಲಿಗರ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್, ಕೇಂದ್ರಪಡೆ ಹಾಗೂ ಆರ್‌ಎಎಫ್ ಸಿಬ್ಬಂದಿ ನಿಯೋಜಿಸಿದೆ. ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಲಾಗಿದೆ. ಹತ್ಯೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ತಮ್ಲುಕ್ ಲೋಕಸಭಾ ಕ್ಷೇತ್ರ ಪರಿಧಿಗೆ ಒಳಪಡುವ ಪ್ರದೇಶ ಇದಾಗಿದೆ. ಇಲ್ಲಿ ಮೇ 25ರಂದು ಮತದಾನ ನಿಗದಿಯಾಗಿದೆ.