ಆಜಂಗಢ : ಪೌರತ್ವ ತಿದ್ದುಪಡಿ ಕಾಯ್ದೆ(CAA) ಅಡಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಬುಧವಾರ ಅಧಿಕೃತವಾಗಿ ಆರಂಭಿಸಿದೆ.
ಆದರೆ ಪ್ರತಿಪಕ್ಷಗಳಾದ ಸಮಾಜವಾದಿ ಪಾರ್ಟಿ(ಎಸ್‌ಪಿ) ಮತ್ತು ಕಾಂಗ್ರೆಸ್ ಈ ಕಾನೂನಿನ ಬಗ್ಗೆ ಸುಳ್ಳು ಸುದ್ದಿ ಹರಡುವ ಮೂಲಕ ದೇಶದಲ್ಲಿ ಗಲಭೆ ಉಂಟುಮಾಡಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಲಾಲ್‌ಗಂಜ್ ಪ್ರದೇಶದಲ್ಲಿ ಲೋಕಸಭೆ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಎ ಅಡಿಯಲ್ಲಿ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಇವರು ದೀರ್ಘಕಾಲದಿಂದ ನಿರಾಶ್ರಿತರಾಗಿ ದೇಶದಲ್ಲಿ ವಾಸಿಸುತ್ತಿದ್ದಾರೆ. ಈ ನಿರಾಶ್ರಿತರನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದೂ ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ ಸಿಎಎ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡಲು ಯತ್ನಿಸಿದವು. ಅಲ್ಲದೇ ಉತ್ತರ ಪ್ರದೇಶ ಸೇರಿದಂತೆ ದೇಶದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸಿದರು ಎಂದು ಪ್ರಧಾನಿ ದೂರಿದ್ದಾರೆ.
'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಎಎ ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ ಅದು ಅಸಾಧ್ಯ. ನೀವು ಏನು ಬೇಕಾದರೂ ಮಾಡಿ. ಆದರೆ ಸಿಎಎ ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.