HEALTH TIPS

ಮಂಗಳೂರಿನಲ್ಲಿ ಐಪಿಎಲ್‌ ಜೋಶ್‌!

          ಮಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳ ನಡುವಿನ ಪಂದ್ಯದ ಎರಡನೇ ಓವರ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಎಸೆತದಲ್ಲಿ ವೃದ್ಧಿಮಾನ್‌ ಸಹಾ ಅವರು ವಿಕೆಟ್‌ ಕೀಪರ್‌ ದಿನೇಶ್ ಕಾರ್ತಿಕ್‌ ಕೈಗೆ ಕ್ಯಾಚಿತ್ತಾಗ ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಕ್ರಿಕೆಟ್‌ ಅಭಿಮಾನಿಗಳ ಕೇಕೆ ಶನಿವಾರ ಮುಗಿಲು ಮುಟ್ಟಿತು.

            ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್‌ ನಡುವಿನ ಈ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕುಳಿತು ವೀಕ್ಷಿಸುತ್ತೇವೇನೋ ಎಂಬಂತೆ ಆರ್‌ಸಿಬಿ ಅಭಿಮಾನಿಗಳು ಇಲ್ಲಿ ಸಂಭ್ರಮಿಸಿದರು. ಕರಾವಳಿ ಉತ್ಸವ ಮೈದಾನದಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) 'ಟಾಟಾ ಐಪಿಎಲ್‌ ಫ್ಯಾನ್ ‍ಪಾರ್ಕ್‌' ಪರಿಕಲ್ಪನೆಯಡಿ ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿಅಳವಡಿಸಿದ್ದ 32x18 ಅಡಿ ವಿಸ್ತೀರ್ಣದ ಪರದೆಯಲ್ಲಿ ಐಪಿಎಲ್‌ ಪಂದ್ಯವನ್ನು ಕಣ್ತುಂಬಿಕೊಳ್ಳುವಾಗ ಅವರ ಸಡಗರ ಇಮ್ಮಡಿಗೊಂಡಿತು. ನಗರದಲ್ಲಿ ಐಪಿಎಲ್‌ ಜೋಶ್‌ ಅನ್ನು ಸೃಷ್ಟಿಸಿತ್ತು.

             ಐಪಿಎಲ್‌ನ ಈ ಸಲದ ಟೂರ್ನಿಯುದ್ದಕ್ಕೂ ಕಳಪೆ ಬೌಲಿಂಗ್‌ನಿಂದ ಟೀಕೆಗೆ ಗುರಿಯಾಗಿದ್ದ ಆರ್‌ಸಿಬಿಯ ಬೌಲರ್‌ಗಳು ಶನಿವಾರದ ಪಂದ್ಯದ ಮೊದಲ ಪವರ್‌ ಪ್ಲೇನಲ್ಲಿ ಸಂಘಟಿಸಿದ ಬಿಗು ಬೌಲಿಂಗ್‌ ದಾಳಿಯ ಪ್ರತಿ ಎಸೆತವನ್ನೂ ದೊಡ್ಡ ಪರದೆಯಲ್ಲಿ ಕಂಡು ಖುಷಿಪಡುವ ಅವಕಾಶ ಮಂಗಳೂರಿನ ಜನತೆಗೆ ಒದಗಿಬಂದಿತ್ತು.

           ಆ‌ರ್‌ಸಿಬಿ ಆಡಿದ ಈ ಪಂದ್ಯದ ಪ್ರತಿ ಓವರ್‌ಗಳ ನಡುವೆ ಪ್ರಸಾರವಾದ ಕನ್ನಡ ಚಿತ್ರಗೀತೆಗಳ ತುಣುಕುಗಳು ಕನ್ನಡತನದ ಸೊಗಡನ್ನು ದಯಪಾಲಿಸಿದವು.

           ಕೆಲವು ವೀಕ್ಷಕರು ಆರ್‌ಸಿಬಿಯ 'ಜೆರ್ಸಿ' ಧರಿಸಿ, ಮುಖದಲ್ಲಿ ತಂಡದ ಹೆಸರನ್ನು ಬರೆದುಕೊಂಡು ಅಭಿಮಾನ ಮೆರೆದರು. ಇನ್ನು ಕೆಲವರು 'ಕೊಹ್ಲಿ ಇವತ್ತಿನ ಪಂದ್ಯ ಗೆದ್ದುಕೊಡು' ಎಂದು ಬರೆದಿದ್ದ ಫಲಕವನ್ನು ಪ್ರದರ್ಶಿಸಿದರು.

                ಕ್ರಿಕೆಟ್‌ ಅಭಿಮಾನಿಗಳು ಒಂದೆಡೆ ಪಂದ್ಯ ವೀಕ್ಷಿಸುತ್ತಿದ್ದರೆ, ಇನ್ನು ಕೆಲವರು ಚೆಂಡೆಸೆಯುವ ಯಂತ್ರದ ನೆರವಿನಿಂದ 'ನೆಟ್‌ ಪ್ರಾಕ್ಟೀಸ್‌' ನಡೆಸುವ ಮೂಲಕ ತಮ್ಮ ಬ್ಯಾಟಿಂಗ್ ಕೌಶಲವನ್ನು ಒರೆಗೆ ಹಚ್ಚಿದರು. ಮತ್ತೆ ಕೆಲವರು ಗುರಿ ಇಟ್ಟು ಚೆಂಡೆಸೆಯುವ ಸವಾಲು ಸ್ವೀಕರಿಸಿದ್ದರು. ಕೆಲವು ಚಿಣ್ಣರು 'ಕಿಡ್ಸ್‌ ಜೋನ್‌'ನಲ್ಲಿ ಇದ್ಯಾವುದರ ಪರಿವೆಯೇ ಇಲ್ಲದೇ ಜಾರು ಬಂಡಿ ಆಟದಲ್ಲಿ ತಲ್ಲೀನರಾಗಿದ್ದರು.

ಭಾನುವಾರ ನಡೆಯಲಿರುವ ಎರಡು ಪಂದ್ಯಗಳನ್ನು ಇಲ್ಲಿ ದೊಡ್ಡ ಪರದೆಯಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries