ಹೇಗ್: ಗಾಝಾದಲ್ಲಿನ ಯುದ್ಧ ದುರಂತವಾಗಿದೆ, ಆದರೆ ನರಮೇಧವಲ್ಲ. ದಕ್ಷಿಣ ಆಫ್ರಿಕಾವು ವಿಶ್ವಸಂಸ್ಥೆಯ ನರಮೇಧ ನಿರ್ಣಯವನ್ನು ಅಪಹಾಸ್ಯ ಮಾಡಿದೆ ಎಂದು ಇಸ್ರೇಲ್ ಶುಕ್ರವಾರ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯದಲ್ಲಿ ವಾದ ಮಂಡಿಸಿದೆ.
ಗಾಝಾದ ರಫಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ತಕ್ಷಣ ನಿಲ್ಲಿಸಲು ಮತ್ತು ಗಾಝಾದಲ್ಲಿ ಕದನವಿರಾಮಕ್ಕೆ ಆದೇಶಿಸುವಂತೆ ಕೋರಿ ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ಯಲ್ಲಿ ಅರ್ಜಿ ದಾಖಲಿಸಿದೆ. ದಕ್ಷಿಣ ಆಫ್ರಿಕಾವು ವಾಸ್ತವತೆಯನ್ನು ಮರೆಮಾಚುತ್ತಿದೆ. ಸತ್ಯ ಮತ್ತು ವಾಸ್ತವತೆಯಿಂದ ಸಂಪೂರ್ಣ ಭಿನ್ನವಾದ ಚಿತ್ರಣವನ್ನು ನಾಲ್ಕನೇ ಬಾರಿ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯಕ್ಕೆ ನೀಡುವ ಮೂಲಕ ನರಮೇಧಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆ ನಿರ್ಣಯವನ್ನು ಅಪಹಾಸ್ಯ ಮಾಡುತ್ತಿದೆ' ಎಂದು ಇಸ್ರೇಲ್‍ನ ನ್ಯಾಯವಾದಿ ಗಿಲಾಡ್ ನೋಮ್ ವಾದ ಮಂಡಿಸಿದ್ದಾರೆ.
ರಫಾದಲ್ಲಿ ಹೆಚ್ಚಿನ ಜನರು ಆಶ್ರಯ ಪಡೆದಿರುವುದನ್ನು ಇಸ್ರೇಲ್ ಅರಿತಿದೆ. ಜತೆಗೆ, ಈ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಲು ಹಮಾಸ್ ಪ್ರಯತ್ನಿಸುತ್ತಿರುವುದನ್ನೂ ಅರಿತಿದೆ. ಆದ್ದರಿಂದಲೇ ರಫಾದಲ್ಲಿ ಭಾರೀ ಪ್ರಮಾಣದ ದಾಳಿಯನ್ನು ನಡೆಸುತ್ತಿಲ್ಲ. ಜನರನ್ನು ಸ್ಥಳಾಂತರಿಸುವ ಮತ್ತು ಮಾನವೀಯ ನೆರವು ಪೂರೈಕೆ ಚಟುವಟಿಕೆಗಳಿಗೆ ತೊಂದರೆಯಾಗದ ರೀತಿಯಲ್ಲಿ ನಿರ್ದಿಷ್ಟ ಮತ್ತು ಸ್ಥಳೀಯ ಕಾರ್ಯಾಚರಣೆಗೆ ಆದ್ಯತೆ ನೀಡಲಾಗಿದೆ ಎಂದವರು ಹೇಳಿದ್ದಾರೆ. ಗುರುವಾರ ವಾದ ಮಂಡಿಸಿದ್ದ ದಕ್ಷಿಣ ಆಫ್ರಿಕಾದ ನ್ಯಾಯವಾದಿ ವುಸಿಮುಜಿ ಮಡೊನ್ಸೆಲಾ ` ಗಾಝಾದಲ್ಲಿ ಸಾಮೂಹಿಕ ಸಮಾಧಿ, ಚಿತ್ರಹಿಂಸೆ ಹಾಗೂ ಮಾನವೀಯ ನೆರವು ಪೂರೈಕೆಗೆ ಉದ್ದೇಶಪೂರ್ವಕ ಅಡ್ಡಿ'ಗೆ ಸಂಬಂಧಿಸಿದ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದರು. `ಕಳೆದ ಬಾರಿ ಈ ನ್ಯಾಯಾಲಯದ ಎದುರು ಹಾಜರಾಗಿದ್ದಾಗ ಫೆಲೆಸ್ತೀನ್ ಜನರ ವಿರುದ್ಧದ ನರಮೇಧಕ್ಕೆ ತಡೆಬೀಳಬಹುದು ಎಂದು ಆಶಿಸಿದ್ದೆವು. ಆದರೆ, ಇಸ್ರೇಲ್‍ನಹ ನರಮೇಧ ಮತ್ತಷ್ಟು ಬಿರುಸಿನಿಂದ ಮುಂದುವರಿದಿದೆ ಮತ್ತು ಹೊಸ, ಭಯಾನಕ ಹಂತವನ್ನು ತಲುಪಿದೆ' ಎಂದು ಮಡೊನ್ಸೆಲಾ ಹೇಳಿದರು. ಇದನ್ನು ಆಕ್ಷೇಪಿಸಿದ ಇಸ್ರೇಲ್‍ನ ಪ್ರತಿನಿಧಿ `ಸುಳ್ಳನ್ನು ಹಲವು ಬಾರಿ ಹೇಳಿದರೆ ಸತ್ಯವಾಗುವುದಿಲ್ಲ. ಪದೇ ಪದೇ ನರಮೇಧ ಎಂದು ಪುನರುಚ್ಚರಿಸಿದ ಮಾತ್ರಕ್ಕೆ ಅದು ನರಮೇಧವಾಗದು' ಎಂದರು. ಗಾಝಾಕ್ಕೆ ಇಂಧನ, ಔಷಧ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಗಾಝಾದಲ್ಲಿನ ಕಾರ್ಯಾಚರಣೆಯ ಸಂದರ್ಭ ನಾಗರಿಕರಿಗೆ ಹಾನಿಯಾಗುವುದನ್ನು ಕಡಿಮೆಗೊಳಿಸಲು ಇಸ್ರೇಲ್ ಅಸಾಮಾನ್ಯ ಕ್ರಮಗಳನ್ನು ಕೈಗೊಂಡಿದೆ ಎಂದವರು ಪ್ರತಿಪಾದಿಸಿದ್ದಾರೆ.
ತುರ್ತು ಆದೇಶಕ್ಕೆ ದಕ್ಷಿಣ ಆಫ್ರಿಕಾ ಆಗ್ರಹ:
ಗಾಝಾದಲ್ಲಿ ನಡೆಸುತ್ತಿರುವ ಆಕ್ರಮಣದಲ್ಲಿ ನರಮೇಧಕ್ಕೆ ಸಂಬಂಧಿಸಿದ 1948ರ ವಿಶ್ವಸಂಸ್ಥೆ ನಿರ್ಣಯವನ್ನು ಇಸ್ರೇಲ್ ಪದೇ ಪದೇ ಉಲ್ಲಂಘಿಸಿದೆ ಎಂದು ದಕ್ಷಿಣ ಆಫ್ರಿಕಾ ಪ್ರತಿಪಾದಿಸಿದೆ. ಈ ಹಿನ್ನೆಲೆಯಲ್ಲಿ ಮೂರು ತುರ್ತು ಆದೇಶಗಳನ್ನು ಐಸಿಜೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.
ರಫಾ ಸೇರಿದಂತೆ ಗಾಝಾದಲ್ಲಿ ನಡೆಸುತ್ತಿರುವ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ, ಅಡೆತಡೆಯಿಲ್ಲದೆ ಮಾನವೀಯ ನೆರವು ಪೂರೈಕೆಗೆ ಅವಕಾಶ ಕಲ್ಪಿಸುವಂತೆ ಇಸ್ರೇಲ್‍ಗೆ ಆದೇಶಿಸಬೇಕು. ಹಾಗೂ ಈ ಎರಡು ಆದೇಶಗಳ ಪಾಲನೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಐಸಿಜೆಗೆ ವರದಿ ಒಪ್ಪಿಸುವಂತೆ ಇಸ್ರೇಲ್‍ಗೆ ಸೂಚಿಸಬೇಕು ಎಂದು ದಕ್ಷಿಣ ಆಫ್ರಿಕಾ ಒತ್ತಾಯಿಸಿದೆ.