ನವದೆಹಲಿ: ದೆಹಲಿಯ ಆದಾಯ ತೆರಿಗೆ ಇಲಾಖೆಯ ಸಿಆರ್ ಕಟ್ಟಡದಲ್ಲಿ ಮಂಗಳವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಲ್ಲಿ ಕಚೇರಿಯ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದ 46 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಐಟಿಒ ಪ್ರದೇಶದ ಸಿಆರ್ ಬಿಲ್ಡಿಂಗ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ಇಂದು ಮಧ್ಯಾಹ್ನ ಪಿಸಿಆರ್ ಕರೆ ಬಂದಿತ್ತು.
"ತಕ್ಷಣ ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬೆಂಕಿಯನ್ನು ಹತೋಟಿಗೆ ತರಲಾಯಿತು ಮತ್ತು ಒಟ್ಟು ಏಳು ಜನರನ್ನು ಅಲ್ಲಿಂದ ರಕ್ಷಿಸಲಾಯಿತು. 46 ವರ್ಷದ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರು ಕಚೇರಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರಂತೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಅಗ್ನಿಶಾಮಕ ಸಿಬ್ಬಂದಿ ಐವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಏಳು ಜನರನ್ನು ರಕ್ಷಿಸಿದ್ದಾರೆ ಮತ್ತು ಸಣ್ಣಪುಟ್ಟ ಗಾಯಗೊಂಡ ಒಬ್ಬ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.
"ಆದಾಯ ತೆರಿಗೆ ಇಲಾಖೆಯ ಸಿಆರ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಮಗೆ ಮಧ್ಯಾಹ್ನ 3.07 ಕ್ಕೆ ಕರೆ ಬಂದಿದೆ. ನಾವು ಒಟ್ಟು 21 ಅಗ್ನಿಶಾಮಕ ಟೆಂಡರ್‌ಗಳನ್ನು ರವಾನಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಸ್ಥಳೀಯ ಪೊಲೀಸರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ.