ಕ್ಯಾನ್‌ಬೆರ‍್ರಾ: ಆಸ್ಟ್ರೇಲಿಯಾದಲ್ಲಿನ ಭಾರತದ ರಾಯಭಾರಿ ಗೋಪಾಲ ಬಾಗಲೆ ಅವರು ಸೋಮವಾರ ಇಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವೊಂಗ್ ಅವರನ್ನು ಭೇಟಿ ಮಾಡಿದ್ದು, ದ್ವೀಪಕ್ಷೀಯ ಸಹಕಾರ ಕುರಿತು ಚರ್ಚಿಸಿದರು.
'ಉಭಯ ದೇಶಗಳ ನಡುವಣ ಕಾರ್ಯತಂತ್ರ ಪಾಲುದಾರಿಕೆಯು ಹೊಸ ಎತ್ತರವನ್ನು ತಲುಪುತ್ತಿದೆ' ಎಂದು ತಮ್ಮ ಭೇಟಿ ಕುರಿತಂತೆ ಭಾರತದ ರಾಯಭಾರಿಯು 'ಎಕ್ಸ್'ನಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
'ವಿದೇಶಾಂಗ ಸಚಿವರ ಜೊತೆಗಿನ ಭೇಟಿಯು ಸೌಹಾರ್ದವಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಕುರಿತಂತೆ ವಸ್ತುನಿಷ್ಠ ಚರ್ಚೆ ನಡೆಯಿತು' ಎಂದು ಹೇಳಿದ್ದಾರೆ.
ವಿಮಾನನಿಲ್ದಾಣಗಳಲ್ಲಿನ ಭದ್ರತೆ, ರಕ್ಷಣಾ ಯೋಜನೆಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳ ಕಳವಿಗೆ ಯತ್ನಿಸಿದ ಆರೋಪದಡಿ ಭಾರತದ ಇಬ್ಬರು ಗೂಢಚಾರರನ್ನು 2020ರಲ್ಲಿ ಗಡೀಪಾರು ಮಾಡಲಾಗಿತ್ತು ಎಂದು ಮಾಧ್ಯಮ ವರದಿಗಳು ಪ್ರಕಟವಾದ ಹಿಂದೆಯೇ ಉಭಯತ್ರರ ಭೇಟಿ ನಡೆದಿದೆ.
ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, 'ಅದೊಂದು ಊಹಾತ್ಮಕ ವರದಿ' ಎಂದು ತಳ್ಳಿಹಾಕಿದರು.