ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅಡಿಯಲ್ಲಿ ಭಾರತದ ಪೌರತ್ವ ಪಡೆದ 14 ಮಂದಿಗೆ ಮೊದಲ ಕಂತಿನಲ್ಲಿ ಬುಧವಾರ ಪೌರತ್ವ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಈ ಕುರಿತು 'ಎಕ್ಸ್'ನಲ್ಲಿ ಸಂತಸ ಹಂಚಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಈ ದಿನ ಐತಿಹಾಸಿಕ ದಿನ' ಎಂದು ಬಣ್ಣಿಸಿದ್ದಾರೆ.
'ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಬುಧವಾರ 14 ಫಲಾನುಭವಿಗಳಿಗೆ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರ ಮಾಡಿದ್ದಾರೆ. ಸಿಎಎ ಅಡಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಪ್ರತ್ಯೇಕ ವೆಬ್ ಪೋರ್ಟಲ್ ತೆರೆಯಲಾಗಿತ್ತು. ಆನ್‌ಲೈನ್ ಮೂಲಕ ಬಂದಿದ್ದ ಅರ್ಜಿಗಳನ್ನು ವಿವಿಧ ಹಂತಗಳಲ್ಲಿ ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವಷ್ಟೆ ಭಾರತದ ಪೌರತ್ವ ನೀಡಲಾಗಿದೆ' ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಈ ಕಾಯ್ದೆಯು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗಿ, 2014ರ ಡಿ.31 ಹಾಗೂ ಅದಕ್ಕೂ ಮುಂಚೆ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಪೌರತ್ವ ನೀಡುವ ಉದ್ದೇಶ ಹೊಂದಿದೆ.
ಪೌರತ್ವ ತಿದ್ದುಪಡಿ ಮಸೂದೆಗೆ 2019ರ ಡಿಸೆಂಬರ್‌ನಲ್ಲಿಯೇ ರಾಷ್ಟ್ರಪತಿ ಅಂಕಿತ ಹಾಕಿದ್ದರೂ, ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ಕಾಯ್ದೆಯು ಜಾರಿಗೆ ಬಂದಿರಲಿಲ್ಲ. ಪ್ರಸಕ್ತ ವರ್ಷದ ಮಾರ್ಚ್‌ನಲ್ಲಷ್ಟೇ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ-2019ಕ್ಕೆ (ಸಿಎಎ) ಸಂಬಂಧಿಸಿದ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿತ್ತು.