ನವದೆಹಲಿ (PTI): ದೇಶದಲ್ಲಿ ಭಯೋತ್ಪಾದನೆ ಹರಡಲು ಪಾಕಿಸ್ತಾನ ಬೆಂಬಲಿತ ಸಂಘಟನೆಗಳು ರೂಪಿಸಿರುವ ಜಾಲವನ್ನು ಬುಡ ಸಮೇತ ಕಿತ್ತು ಹಾಕುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಶನಿವಾರ ಜಮ್ಮು ಪ್ರಾಂತ್ಯದ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.
ನವದೆಹಲಿ (PTI): ದೇಶದಲ್ಲಿ ಭಯೋತ್ಪಾದನೆ ಹರಡಲು ಪಾಕಿಸ್ತಾನ ಬೆಂಬಲಿತ ಸಂಘಟನೆಗಳು ರೂಪಿಸಿರುವ ಜಾಲವನ್ನು ಬುಡ ಸಮೇತ ಕಿತ್ತು ಹಾಕುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಶನಿವಾರ ಜಮ್ಮು ಪ್ರಾಂತ್ಯದ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.
ಜಮ್ಮು ಪ್ರಾಂತ್ಯದ ದೋಡಾ, ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ಎನ್‌ಎಐ ತಂಡಗಳು ವ್ಯಾಪಕ ಶೋಧ ನಡೆಸಿದವು.
ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಐಇಡಿ ಮತ್ತು ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾತ್ಮಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶೋಧ ನಡೆದಿದೆ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.
ಹೈಬ್ರಿಡ್ ಭಯೋತ್ಪಾದಕರು, ಉಗ್ರರ ಬಗ್ಗೆ ಸಹಾನುಭೂತಿ ಹೊಂದಿರುವವರು, ಅವರಿಗೆ ಆಶ್ರಯ ನೀಡಿ ಸಹಾಯ ಮಾಡುವವರು ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಅಂಗಸಂಸ್ಥೆಗಳ ಜತೆ ಸಂಬಂಧ ಹೊಂದಿರುವವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಲಾಯಿತು. ಈ ಸ್ಥಳಗಳಿಂದ ಡಿಜಿಟಲ್ ಸಾಧನಗಳು, ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಇವುಗಳಲ್ಲಿ ಲಷ್ಕರ್-ಎ-ತಯಬಾ (ಎಲ್‌ಇಟಿ), ಜೈಷ್-ಎ- ಮೊಹಮ್ಮದ್ (ಜೆಇಎಂ), ಹಿಜ್ಬುಲ್-ಮುಜಾಹಿದ್ದೀನ್ (ಎಚ್‌ಎಂ), ಅಲ್-ಬದ್ರ್, ಅಲ್ ಕೈದಾ ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವವರ ಸ್ಥಳಗಳು ಸೇರಿವೆ.
ಈ ಸಂಘಟನೆಗಳು ನಡೆಸುತ್ತಿರುವ ಭಯೋತ್ಪಾದಕ ಜಾಲವನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ 2022ರ ಜೂನ್ 21ರಂದು ಎನ್‌ಐಎ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಅಲ್ಲದೆ ತನಿಖೆಯ ಭಾಗವಾಗಿ ಇತ್ತೀಚೆಗೆ ಎನ್‌ಐಎ ಹಲವೆಡೆ ಶೋಧ ಕಾರ್ಯ ಕೈಗೊಂಡಿತ್ತು.
ಶನಿವಾರದ ಶೋಧವೂ ಭಯೋತ್ಪಾದನಾ ಜಾಲವನ್ನು ಬುಡ ಸಮೇತ ಕಿತ್ತುಹಾಕುವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ, ಕೋಮು ಸೌಹಾರ್ದತೆ ಕದಡುವ ಭಯೋತ್ಪಾದನಾ ಸಂಘಟನೆಗಳ ಯೋಜನೆಗಳನ್ನು ಹೊಸಕಿ ಹಾಕುವ ಗುರಿಯನ್ನು ಹೊಂದಿದೆ ಎಂದು ಎನ್‌ಐಎ ತಿಳಿಸಿದೆ.