ಕಾಸರಗೋಡು: ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬೇಡಡ್ಕ ಪೊಲೀಸ್ ಠಾಣೆಯ ಹೆಚ್ಚುವರಿ ಎಸ್.ಐ, ಕೋಳಿಚ್ಚಾಳ್ ನಿವಾಸಿ, ಪನತ್ತಡಿ ಮಾನಡ್ಕದಲ್ಲಿ ವಾಸ್ತವ್ಯವಿರುವ ವಿಜಯನ್(50)ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಶನಿವಾರ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪೊಲೀಸ್ ಠಾಣೆ ಸನಿಹದ ಕ್ವಾಟ್ರಸ್‍ನಲ್ಲಿ ವಿಜಯನ್ ಅವರನ್ನು ಕಳೆದ ಸೋಮವಾರ ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಪತ್ತೆಹಚ್ಚಲಾಗಿದ್ದು, ತಕ್ಷಣ ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದ ಹಿನ್ನೆಲೆಯಲ್ಲಿ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಚುನಾವಣೆ ಸಂದರ್ಭ ವ್ಯಕ್ತಿಯೊಬ್ಬ ಪಂಚಾಯಿತಿ ಅಧ್ಯಕ್ಷರನ್ನು ಅವಮಾನಿಸಿದ ಪ್ರಕರಣದ ತನಿಖೆ ಜವಾಬ್ದಾರಿ ವಿಜಯನ್ ಅವರು ವಹಿಸಿಕೊಂಡಿದ್ದರು. ನಂತರದ ದಿನದಲ್ಲಿ ವಿಜಯನ್ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆನ್ನಲಾಗಿದೆ.