ದುಬೈ: ಭಾರತ ಮತ್ತು ಮಾಲ್ದೀವ್ಸ್ ದ್ವಿಪಕ್ಷೀಯ ಸಂಬಂಧ ಹದಗೆಟ್ಟ ಬೆನ್ನಲ್ಲೇ ಮಾಲ್ದೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ.
ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ರಾಷ್ಟ್ರ ಮಾಲ್ದೀವ್ಸ್. ಅಲ್ಲಿನ ಪ್ರವಾಸೋದ್ಯಮ ಸಚಿವರು ತಮ್ಮ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವಂತೆ ಭಾರತೀಯರಲ್ಲಿ ಮನವಿ ಮಾಡಿದ್ದಾರೆ.
ದುಬೈನಲ್ಲಿ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಲ್ದೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್, ಭಾರತ ಮತ್ತು ಮಾಲ್ದೀವ್ಸ್ ನಡುವಿನ ಐತಿಹಾಸಿಕ ಸಂಬಂಧಗಳ ಕುರಿತು ಒತ್ತಿ ಹೇಳಿದರು.
'ಮಾಲ್ದೀವ್ಸ್ ಸರ್ಕಾರವು ಭಾರತದೊಂದಿಗೆ ಕಾರ್ಯನಿರ್ವಹಿಸಲು ಬಯಸುತ್ತದೆ. ನಾವು ಯಾವಾಗಲೂ ಶಾಂತಿ ಮತ್ತು ಸೌಹಾರ್ದಯುತ ವಾತಾವರಣವನ್ನು ಉತ್ತೇಜಿಸುತ್ತೇವೆ. ನಮ್ಮ ಜನರು ಭಾರತೀಯರ ಆಗಮನಕ್ಕೆ ಆತ್ಮೀಯ ಸ್ವಾಗತ ನೀಡಲಿದ್ದಾರೆ. ದಯವಿಟ್ಟು ಮಾಲ್ದೀವ್ಸ್ ಪ್ರವಾಸೋದ್ಯಮದ ಭಾಗವಾಗಿ ಎಂದು ಪ್ರವಾಸೋದ್ಯಮ ಸಚಿವನಾಗಿ ನಾನು ಭಾರತೀಯರಲ್ಲಿ ಕೇಳಿಕೊಳ್ಳುತ್ತೇನೆ. ನಮ್ಮ ಆರ್ಥಿಕತೆಯು ಪ್ರವಾಸೋದ್ಯಮದ ಮೇಲೆಯೇ ಅವಲಂಬಿತವಾಗಿದೆ' ಎಂದು ವಿನಂತಿಸಿದ್ದಾರೆ.