ಪತ್ತನಂತಿಟ್ಟ: ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರ ಶಬರಿಮಲೆಯಲ್ಲಿ ಭಕ್ತಾದಿಗಳ ದಟ್ಟಣೆ ಕಡಿಮೆ ಮಾಡುವ ಹೆಸರಲ್ಲಿ ತಿರುವಾಂಕೂರು ದೇವಸ್ವಂ ಬೋರ್ಡ್ ಜಾರಿಗೆ ತರುತ್ತಿರುವ ಕಠಿಣ ನಿಯಂತ್ರಣ ಅಯ್ಯಪ್ಪ ಭಕ್ತಾದಿಗಳಿಗೆ ಭಾರಿ ಸಮಸ್ಯೆ ತಂದೊಡ್ಡಲಿದ್ದು, ಈ ವಿಷಯ ಅಯ್ಯಪ್ಪ ಭಕ್ತಾದಿಗಳ ಮಧ್ಯೆ ಚರ್ಚೆಗೆ ಕಾರಣವಾಗುತ್ತಿದೆ.
ಮುಂದಿನ ಮಂಡಲ, ಮಕರ ಸಂಕ್ರಮಣ ಉತ್ಸವ ಸಂದರ್ಭ ಸ್ಪಾಟ್ ಬುಕ್ಕಿಂಗ್ ರದ್ದುಗೊಳಿಸುವುದು ಹಾಗೂ ಪ್ರತಿದಿನ ಭಕ್ತಾದಿಗಳ ದರ್ಶನಕ್ಕಿರುವ ಸಂಖ್ಯೆಯನ್ನು 80ಸಾವಿರಕ್ಕೆ ಸಈಮಿತಗೊಳಿಸುವುದು ಭಾರೀ ಸಮಸ್ಯೆಗೆ ಕಾರಣವಾಗಲಿರುವುದಾಗಿ ಅಯ್ಯಪ್ಪ ಭಕ್ತಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಯ್ಯಪ್ಪ ಭಕ್ತಾದಿಗಳು 41ದಿವಸಗಳ ಕಠಿಣ ವ್ರತಾಚರಣೆಯ ನಂತರ ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ. ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ನಡೆಸಿ ಸನ್ನಿಧಾನ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೆಲವೊಮ್ಮೆ ಗುಂಪಿನ ಒಂದೆರಡು ಮಂದಿ ವ್ರತಧಾರಿಗಳಿಗೆ ಬುಕ್ಕಿಂಗ್ ನಡೆಸಲಾಗದಿದ್ದರೂ, ಚೆಂಗನ್ನೂರು ರೈಲ್ವೆ ನಿಲ್ದಾಣ, ಪಂದಳಂ ವಲಿಯಕೋಯಿಕ್ಕಲ್ ದೇವಸ್ಥಾನ, ಎರುಮೇಲಿ, ನೀಲಕ್ಕಲ್, ಪಂಪಾಗಣಪತಿ ಕ್ಷೇತ್ರ, ವಂಡಿಪೆರಿಯಾರ್ ಮುಂತಾದೆಡೆ ಇವರಿಗಾಗಿ ದೇವಸ್ವಂ ಬೋರ್ಡ್ ಸ್ಪಾಟ್ ಬುಕ್ಕಿಂಗ್ ಸೌಲಭ್ಯ ಕಲ್ಪಿಸಿತ್ತು. ಕೆಲವೊಮ್ಮೆ ವರ್ಚುವಲ್ ಕ್ಯೂ ಬುಕ್ಕಿಂಗ್ ನಡೆಸಿದವರೆಲ್ಲರೂ, ದರ್ಶನಕ್ಕೆ ಆಗಮಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆ ಮೂಲಕ ಇತರರಿಗೆ ನೋಂದಾವಣೆಗೆ ಅವಕಾಶ ಲಭ್ಯವಾಗುತ್ತದೆ.
ದೇವಸ್ವಂ ಮಂಡಳಿ ಜಾರಿಗೆ ತರಲುದ್ದೇಶಿಸಿರುವ ಎರಡು ಪ್ರಮುಖ ತೀರ್ಮಾನಗಳ ಬಗ್ಗೆ ಭಕ್ತಾದಿಗಳು ಈಗಾಗಲೇ ಅಸಮಧಾನ ವ್ಯಕ್ತಪಡಿಸಿದ್ದಾರೆ.