ನವದೆಹಲಿ: ಉಗ್ರರ ಕುಟುಂಬದವರು ಹಾಗೂ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ಸಂಬಂಧಿಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ನೌಕರಿ ಪಡೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಉಗ್ರರನ್ನಷ್ಟೇ ಅಲ್ಲ, ಭಯೋತ್ಪಾದನೆಗೆ ಪೂರಕವಾದ ವಾತಾವರಣವನ್ನೇ ನಿರ್ನಾಮ ಮಾಡಲು ಮುಂದಾಗಿದೆ.
'ಯಾರಾದರೂ ಉಗ್ರ ಸಂಘಟನೆಗಳನ್ನು ಸೇರಿದರೆ, ಅವರ ಕುಟುಂಬದವರು ಸರ್ಕಾರಿ ಕೆಲಸ ಗಿಟ್ಟಿಸಲು ಸಾಧ್ಯವಾಗುವುದಿಲ್ಲ. ಕಾಶ್ಮೀರದಲ್ಲಿ ಇಂತಹ ನಿರ್ಧಾರ ಕೈಗೊಂಡಿದ್ದೇವೆ' ಎಂದು ಶಾ ತಿಳಿಸಿದ್ದಾರೆ.
ಅದೇರೀತಿ, ಕಲ್ಲು ತೂರಾಟ ಕೃತ್ಯಗಳಲ್ಲಿ ತೊಡಗಿಕೊಳ್ಳುವವರ ಕುಟುಂಬದವರಿಗೂ ಸರ್ಕಾರಿ ಉದ್ಯೋಗಾವಕಾಶ ನಿರಾಕರಿಸಲಾಗುವುದು ಎಂದಿದ್ದಾರೆ.
ಈ ನಿರ್ಧಾರದ ವಿರುದ್ಧ ಕೆಲವು ಮಾನವ ಹಕ್ಕು ಹೋರಾಟಗಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಸರ್ಕಾರ ಮೇಲುಗೈ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಗ್ರ ಚಟುವಟಿಕೆ ಇಳಿಮುಖ
ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ತಗ್ಗಿವೆ. 2018ರಲ್ಲಿ ಭಯೋತ್ಪಾದನೆ ಸಂಬಂಧಿತ ಸುಮಾರು 228 ಪ್ರಕರಣಗಳು ವರದಿಯಾಗಿದ್ದವು. ಅದು 2023ರ ಹೊತ್ತಿಗೆ 50ಕ್ಕೆ ಕುಸಿದಿದೆ.
2018ರಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಣ ಗುಂಡಿನ ಚಕಮಕಿ ನಡೆದ ಸುಮಾರು 189 ಪ್ರಕರಣಗಳು ವರದಿಯಾಗಿದ್ದವು. ಅದು 2023ರಲ್ಲಿ 40ಕ್ಕೆ ಇಳಿದಿದೆ. ಅದೇ ರೀತಿ ಉಗ್ರರ ದಾಳಿಯಲ್ಲಿ 55 ನಾಗರಿಕರು ಮೃತಪಟ್ಟಿದ್ದರು. ಕಳೆದ ವರ್ಷ ಐವರು ಸಾವಿಗೀಡಾಗಿದ್ದಾರೆ.
2018ರಲ್ಲಿ ಭದ್ರತಾ ಪಡೆಗಳು 91 ಸಿಬ್ಬಂದಿ ಹುತಾತ್ಮರಾಗಿದ್ದರು. ಅದು 2023ರ ಹೊತ್ತಿಗೆ 15ಕ್ಕೆ ತಗ್ಗಿದೆ ಎಂದು ಮಾಹಿತಿ ನೀಡಿದೆ.