ಕೊಲ್ಲಂ: ಪರಾವೂರ್ ಪುದಕುಳಂ ಎಂಬಲ್ಲಿ ಪತ್ನಿ, ಪುತ್ರಿಯನ್ನು ಕತ್ತುಸೀಳಿ ಕೊಲೆಗೈದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹತ್ಯಾಯತ್ನದಿಂದ ಪಾರಾಗಿರುವ ಪುತ್ರನನ್ನು ಗಂಭೀರಾಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೀತಾ(39), ಪುತ್ರಿ ಶ್ರೀನಂದಾ(14)ಮೃತಪಟ್ಟವರು. ಪುತ್ರ ಶ್ರೀರಾಗ್(18)ನನ್ನು ಗಂಭೀರಾವಸ್ಥೆಯಲ್ಲಿ ಪಾರಿಪಳ್ಳಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ ಕೃತ್ಯದ ನಂತರ ಪ್ರೀತಾ ಅವರ ಪತಿ ಶ್ರಿಜು(46)ಆತ್ಮಹತ್ಯೆಗೆ ಯತ್ನಿಸಿದ್ದು, ಈತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಬೆಳಗ್ಗೆ ಕೃತ್ಯ ನಡೆದಿದೆ. ಕುಟುಂಬ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಮಧ್ಯೆ, ಪತ್ನಿ ಪ್ರೀತಾಗೆ ಅರ್ಬುದ ರೋಗ ಬಾಧಿಸಿರುವುದರಿಂದ ಕಂಗೆಟ್ಟ ಶ್ರಿಜು ಪತ್ನಿ, ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿರಬೇಕೆಂದು ಸಂಶಯಿಸಲಾಗಿದೆ. ಪ್ರೀತಾ ಅವರು ಸ್ಥಳೀಯ ಬ್ಯಂಕ್ ಒಂದರಲ್ಲಿ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.