ಕಾಸರಗೋಡು: ಮಲಗಿ ನಿದ್ರಿಸುತ್ತಿದ್ದ ಬಾಲಕಿಯನ್ನು ಮನೆಯೊಳಗಿಂದ ಅಪಹರಿಸಿ ಅತ್ಯಾಚಾರವೆಸಗಿದ ಘಟನೆ ಆಘಾತಕಾರಿಯಾಗಿದ್ದು, ಕೇರಳದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಸರ್ಕಾರದ ವೈಫಲ್ಯ ಇದರಿಂದ ಸಾಬೀತಾಗಿರುವುದಾಗಿ ಮಹಿಳಾಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಪಾಲಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಗೃಹಖಾತೆಯನ್ನು ನಿಭಾಯಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಬೇಕು. ಕೆಲಸದ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲ ತಮ್ಮ ಸ್ವಂತ ಮನೆಯಲ್ಲಿಯೂ ಮಹಿಳೆಯರು ಹಾಗೂ ಮಕ್ಕಳಿಗೆ ರಕ್ಷಣೆಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಪಿಣರಾಯಿ ಆಡಳಿತದಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಪ್ರಹಸನವಾಗಿ ಪರಿಣಮಿಸಿದೆ. ಅತ್ಯಂತ ಗಂಭೀರ ಪ್ರಕರಣಗಳಿಂದಲೂ ಆರೋಪಿಗಳು ಪಾರಾಗಿಬರುವಲ್ಲಿ ಸರ್ಕಾರದ ಪೊಲೀಸ್ ವ್ಯವಸ್ಥೆ ಸಹಕಾರಿಯಾಗುತ್ತಿದೆ. ಮರಣದಂಡನೆ ವಿಧಿಸಬೇಕಾದಂತಹ ಪ್ರಕರಣಗಳನ್ನೂ ಅತ್ಯಂತ ಕ್ಷುಲ್ಲಕವಾಗಿ ಪರಿಗಣಿಸಲಾಗುತ್ತಿದೆ. ಗೃಹ ಇಲಾಖೆಯನ್ನು ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯ ಇಂತಹ ಅಪರಾಧಗಳು ಹೆಚ್ಚಲು ಕಾರಣವಾಗುತ್ತಿದೆ.
ಕೇರಳದಲ್ಲಿ 1991 ರಲ್ಲಿ ಕೇರಳದಲ್ಲಿ ಕೊನೆಯದಾಗಿ ಮರಣದಂಡನೆ ವಿಧಿಸಲಾಯಿತು. ನಂತರ ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣದಂಡನೆ ವಿಧಿಸಿದ್ದರೂ ಒಂದೂ ಜಾರಿಯಾಗದಿರುವುದು ಅಪರಾಧಿಗಳಿಗೆ ಧೈರ್ಯ ತಂದುಕೊಟ್ಟಿದೆ. ಕಾಞಂಗಾಡಿನಲ್ಲಿ ನಡೆದಿರುವ ಘಟನೆಯಿಂದ ಇಡೀ ರಾಜ್ಯ ತಲೆ ತಗ್ಗಿಸುವಂತಾಗಿದ್ದು, ಘಟನೆಯಲ್ಲಿ ಆರೋಪಿಗಳನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಎಂ.ಎಲ್. ಅಶ್ವಿನಿ ಆಗ್ರಹಿಸಿದರು.