HEALTH TIPS

ಕೇರಳದ ಹಲವೆಡೆ ಭಾರಿ ಮಳೆ: ಇಡುಕ್ಕಿಯಲ್ಲಿ ರಾತ್ರಿ ಪ್ರಯಾಣ ನಿಷೇಧ

            ತಿರುವನಂತಪುರ: ಕೇರಳದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿಯಿಂದಲೇ ಭಾರಿ ಮಳೆಯಾಗುತ್ತಿದ್ದು, ಗುಡ್ಡಗಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚು ಜಾಗರೂಕವಾಗಿರುವಂತೆ ಅಧಿಕಾರಿಗಳು ಭಾನುವಾರ ಸೂಚನೆ ನೀಡಿದ್ದಾರೆ.

            ಹವಾಮಾನ ಇಲಾಖೆಯು, ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಸೋಮವಾರವು 'ರೆಡ್ ಅಲರ್ಟ್' ಘೋಷಿಸಿದ್ದು, ತಿರುವನಂತಪುರ, ಕೊಲ್ಲಂ, ಆಲಪ್ಪುಳ ಮತ್ತು ಎರ್ನಾಕುಳಂ ಸೇರಿ ಇತರ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.

            ತಿರುವನಂತಪುರದಲ್ಲಿ ಶನಿವಾರ ರಾತ್ರಿ ಭಾರಿ ಮಳೆಯಾಗಿದೆ. ನಗರ ಮತ್ತು ಅದರ ಉಪನಗರಗಳ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕೆಲವೆಡೆ ಮನೆ, ಅಂಗಡಿಗಳು ಜಲಾವೃತಗೊಂಡಿವೆ.

              ರಾಜಧಾನಿ ಮತ್ತು ಅದರ ಉಪನಗರಗಳ ಕೆಲವು ಪ್ರದೇಶಗಳಲ್ಲಿ ಕಾಲುವೆಗಳು ಉಕ್ಕಿ ಹರಿಯುತ್ತಿವೆ. ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಹಲವೆಡೆ ಜಲಾವೃತವಾಗಿದೆ. ಮುಂಗಾರು ಪೂರ್ವದಲ್ಲಿ ಕಾಲುವೆಗಳು ಮತ್ತು ಒಳಚರಂಡಿಯನ್ನು ಸ್ವಚ್ಚಗೊಳಿಸದಿರುವುದೇ ರಾಜಧಾನಿ ಹಾಗೂ ಉಪನಗರಗಳಲ್ಲಿ ತಗ್ಗುಪ್ರದೇಶಗಳು ಜಲಾವೃತವಾಗಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಾತ್ರಿ ಪ್ರಯಾಣ, ಗಣಿಗಾರಿಕೆ ನಿಷೇಧ:

              ಇಡುಕ್ಕಿ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಪ್ರಯಾಣವನ್ನು ಭಾನುವಾರದಿಂದ, ರೆಡ್ ಅಲರ್ಟ್‌ ಮತ್ತು ಆರೆಂಜ್ ಅಲರ್ಟ್ ಹಿಂಪಡೆಯುವವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ತಹಶೀಲ್ದಾರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

                  ಭಾರಿ ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಎರ್ನಾಕುಳಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries