ಮುಂಬೈ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವು ವಿಶ್ವದ ಅತಿದೊಡ್ಡ ಚುನಾವಣೆಯನ್ನು ಕಾರ್ಯಗತಗೊಳಿಸುವುದನ್ನು ವೀಕ್ಷಿಸುವುದು ನಿಜಕ್ಕೂ ಅದ್ಭುತವಾಗಿದೆ ಎಂದು ಭಾರತದಲ್ಲಿನ ಯುನೈಟೆಡ್ ಸ್ಟೇಟ್ಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಇದೀಗ 18ನೇ ಲೋಕಸಭಾ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 19ರಿಂದ ಆರಂಭವಾಗಿ ಮತದಾನ ದೇಶಾದ್ಯಂತ 7 ಹಂತಗಳಲ್ಲಿ ನಡೆಯಲಿದೆ. ಈವರೆಗೂ ಐದು ಹಂತಗಳು ಪೂರ್ಣಗೊಂಡಿದ್ದು, ಇನ್ನೂ ಎರಡು ಹಂತಗಳು ಬಾಕಿ ಇವೆ. ಮೇ 25 ರಂದು 6ನೇ ಹಂತ ಹಾಗೂ ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.
ಮೊದಲ ಬಾರಿಯ ವೀಕ್ಷಕರಾಗಿ ಭಾರತದ ಚುನಾವಣೆ ಬಗ್ಗೆ ಮಾತನಾಡಿದ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ, ರಾಷ್ಟ್ರದಾದ್ಯಂತ ನಡೆಯುತ್ತಿರುವ ರೋಮಾಂಚಕ ಪ್ರಚಾರ ಮತ್ತು ಸಮಾವೇಶಗಳಿಂದ ತುಂಬಾ ಪ್ರಭಾವಿತರಾಗಿರುವುದಾಗಿ ಮತ್ತು ಅದೆಲ್ಲವನ್ನೂ ವೀಕ್ಷಿಸಲು ತುಂಬಾ ಸ್ಪೂರ್ತಿದಾಯಕವಾಗಿದೆ. ಹೀಗಾಗಿ ನಾನು ಭಾರತೀಯರಿಗೆ ಶುಭ ಹಾರೈಸುತ್ತೇನೆಂದು ಹೇಳಿದ್ದಾರೆ.
ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವು ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದರೆ, ಪ್ರತಿಪಕ್ಷಗಳ ಇಂಡಿ ಒಕ್ಕೂಟವು ಬಿಜೆಪಿಯಿಂದ ಮತ್ತೆ ಅಧಿಕಾರವನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಿದ್ದಾರೆ. ಅವರು 2014 ಮತ್ತು 2019 ರಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಇದೇ ಸಂದರ್ಭದಲ್ಲಿ ಭಾರತದ ಬೆಳವಣಿಗೆಯನ್ನು ಶ್ಲಾಘಿಸಿದ ಗಾರ್ಸೆಟ್ಟಿ, ಅಮೆರಿಕ ಮತ್ತು ಭಾರತ ನೈಸರ್ಗಿಕ ಪಾಲುದಾರರು ಮತ್ತು ನಾವು ಸ್ನೇಹಿತರಾಗಿದ್ದೇವೆ. ಉಭಯ ರಾಷ್ಟ್ರಗಳು ತಮ್ಮ ತಮ್ಮ ಆರ್ಥಿಕತೆಯನ್ನು ಒಟ್ಟಿಗೆ ವಿಸ್ತರಿಸುವುದನ್ನು ಮುಂದುವರೆಸಿದರೆ, ಉದ್ಯೋಗಗಳು ಮತ್ತು ಆರ್ಥಿಕ ಸಮೃದ್ಧಿಗಾಗಿ ಉತ್ತಮ ಕೆಲಸಗಳನ್ನು ಮಾಡಬಹುದು ಮತ್ತು ವೈವಿಧ್ಯಗೊಳಿಸುವ ಮೂಲಕ ಜಗತ್ತಿಗೆ ಸಹಾಯ ಮಾಡಬಹುದು. ಭಾರತ-ಯುಎಸ್ ಯಾವಾಗಲೂ ಬಲವಾದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೊಂದಿದೆ ಎಂದು ಗಾರ್ಸೆಟ್ಟಿ ಹೇಳಿದರು.
ಬಾಹ್ಯಾಕಾಶ ಕ್ಷೇತ್ರದ ವಿಷಯದಲ್ಲಿ ಭಾರತ ಮತ್ತು ಯುಎಸ್ ನಡುವಿನ ಸಂಬಂಧದ ಕುರಿತು ಮಾತನಾಡಿದ ಗಾರ್ಸೆಟ್ಟಿ, ನಾವು ಒಟ್ಟಾಗಿ ನಿರ್ಮಿಸಿದ ಉಪಗ್ರಹವನ್ನು ಹೊಂದಲಿದ್ದೇವೆ. ಇದು ನಮ್ಮ ಗ್ರಹವನ್ನು ಉಳಿಸಲು ಸಹಾಯ ಮಾಡಲಿದೆ ಮತ್ತು ಈ ವರ್ಷವೇ ಉಪಗ್ರಹವನ್ನು ಉಡಾವಣೆ ಮಾಡಲಿದ್ದೇವೆ. ನಮ್ಮ ಸಂಬಂಧವು ಸಮುದ್ರದ ತಳದಿಂದ ನಕ್ಷತ್ರಗಳವರೆಗೂ ಇದೆ ಎಂದು ನಾವು ಆಗಾಗ್ಗೆ ಹೇಳುತ್ತೇವೆ ಎಂದು ಗಾರ್ಸೆಟ್ಟಿ ಹೇಳಿದರು.