ಕಾಸರಗೋಡು: ಸಿಪಿಎಂ ಅಧೀನದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ವಂಚನಾ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಕೆ ಫೈಸಲ್ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.
ಗ್ರಾಹಕರ ಲಕ್ಷಾಂತರ ರೂ. ಮೊತ್ತವನ್ನು ವಂಚಿಸುವ ಮೂಲಕ ಬ್ಯಾಂಕ್ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿದೆ. ಸಿಪಿಎಂ ಅಧೀನದಲ್ಲಿರುವ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ. ವಂಚನಾ ತಂಡಗಳಿಗೆ ಆಡಳಿತ ಪಕ್ಷದ ಸಂಪೂರ್ಣ ಸಹಕಾರವಿರುವುದರಿಂದ ನಿಷ್ಪಕ್ಷಪಾತ ತನಿಖೆ ಮರೀಚಿಕೆಯಾಗಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಅಡಮಾನಗಳನ್ನು ಪರಿಶೀಲಿಸಿ, ಅಳತೆ, ತೂಕ ಮತ್ತು ನೋಂದಣಿ ಮಾಡುವುದು ಆಡಳಿತ ಸಮಿತಿ ಮತ್ತು ಸಹಕಾರಿ ಇಲಾಖೆಗಳ ಜವಾಬ್ದಾರಿಯಾಗಿದೆ. ಈ ಸಂಬಂಧ ಏಪ್ರಿಲ್ ಮೊದಲ ವಾರದಲ್ಲಿ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಗೆ ನೀಡಬೇಕಾದ ವರದಿಯನ್ನು ಸಹಕಾರಿ ಇಲಾಖೆ ನೀಡಿಲ್ಲ. ಈ ಮಧ್ಯೆ ಆಡಳಿತ ಮಂಡಳಿಗೆ ವಂಚನೆ ಬಗ್ಗೆ ಮಾಹಿತಿ ಇಲ್ಲ ಎಂಬುದು ಶುದ್ಧ ಸುಳ್ಳು
ಸಿ.ಪಿ.ಎಂ. ನಿಯಂತ್ರಣದಲ್ಲಿರುವ ಜಿಲ್ಲೆಯ ಹಲವು ಸಂಘಗಳಲ್ಲಿ ಲಕ್ಷಂತರ ರೂ. ವಂಚನೆ ನಡೆಸಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಸಿಪಿಎಂ ತನ್ನ ಆಡಳಿತದ ಪ್ರಭಾವ ಬಳಸಿ ಸಹಕಾರಿ ಇಲಾಖೆಯ ನೌಕರರಿಗೆ ಬೆದರಿಕೆ ಹಾಕುವ ಮೂಲಕ ವಂಚನೆಯನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ನಾಯಕರು ಮತ್ತು ಗುಂಪು ಆಡಳಿತ ಮಂಡಳಿಯು ಮುನ್ನಡೆಯುತ್ತಿದೆ. ಸಹಕಾರಿ ಇಲಾಖೆ ಸಿಬ್ಬಂದಿ, ಸಿಪಿಎಂನ ಆಣತಿಯಂತೆ ನಡೆದುಕೊಳ್ಳುತ್ತಿರುವುದರಿಂದ, ಪಕ್ಷದ ಅಧೀನದಲ್ಲಿರುವ ಸಹಕಾರಿ ಸಂಘಗಳ್ಲಿ ನಡೆಯುತ್ತಿರುವ ವಂಚನೆ ಬೆಳಕಿಗೆ ಬರುತ್ತಿಲ್ಲ.
ಕಾರಡ್ಕ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಹೆಚ್ಚಾಗಿದ್ದು, ಸುಪ್ರೀಂ ಕೋರ್ಟು ನಿರ್ದೇಶನುಸಾರ ಇವರಿಗೆ ಲಭಿಸಿದ ಪರಿಹಾರ ಮೊತ್ತವನ್ನೂ ಈ ಸಹಕಾರಿ ಸಂಘಗಳಲ್ಲಿ ಠೇವಣಿಯಿರಿಸಲಾಗಿದ್ದು, ಇವರೆಲ್ಲರೂ ಇಂದು ಸಂಕಷ್ಟ ಅನುಭವಿಸುವಂತಾಗಿದೆ. ವಂಚನ ಪ್ರಕರಣದಲ್ಲಿ ಸಿಪಿಎಂ ಮುಖಂಡರು ಹಗೂ ಸಹಕಾರಿ ಇಲಾಖೆ ಸಿಬ್ಬಂದಿ ಕೈವಾಡವಿರುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಮೇ 18ರಂದು ಬೆಳಗ್ಗೆ 10ಕ್ಕೆ ಕಾಸರಗೋಡಿನ ಸಹಕಾರಿ ಇಲಾಖೆ ಜೆ.ಆರ್ ಕಚೇರಿ ಎದುರು ಡಿಸಿಸಿ ವತಿಯಿಂದ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಐದರ್ಶಿ ಕೆ. ನೀಲಕಂಠನ್, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕರುಣ್ ಥಾಪಾ ಮತ್ತು ಎಂ.ಸಿ ಪ್ರಭಾಕರನ್ ಉಪಸ್ಥಿತರಿದ್ದರು.