ಪುಣೆ: ಐಶಾರಾಮಿ ಕಾರು 'ಪೋಶೆ' ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಕನ ತಂದೆ, ಅಪಘಾತ ಸಂಭವಿಸಿದಾಗ ಕಾರು ಚಲಾಯಿಸಿಸುತ್ತಿದ್ದದ್ದು ತಮ್ಮ ಮಗನಲ್ಲ. ಮನೆಯ ಕಾರು ಚಾಲಕ ಎಂದು ಹೇಳಿಕೆ ನೀಡಿದ್ದಾರೆ.
ಪುಣೆಯ ಕಲ್ಯಾಣಿ ನಗರದಲ್ಲಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಟೆಕಿಗಳು ಮೃತಪಟ್ಟಿದ್ದರು.
ಭಾನುವಾರ ರಾತ್ರಿ ಅಪಘಾತ ಸಂಭವಿಸಿದಾಗ ಆರೋಪಿಯ ಜೊತೆಗಿದ್ದ ಸ್ನೇಹಿತ ಮತ್ತು ಕುಟುಂಬದ ಕಾರು ಚಾಲಕನನ್ನು ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕನ ತಾತನನ್ನೂ ವಿಚಾರಣೆ ನಡೆಸಲಾಗಿದೆ.
'ಅಪಘಾತ ಸಂಭವಿಸಿದಾಗ ಕಾರು ಚಾಲನೆ ಮಾಡುತ್ತಿದ್ದುದು ತಾನೇ ಎಂದು ಚಾಲಕ ಮೊದಲ ಹೇಳಿಕೆ ನೀಡಿದ್ದಾನೆ. ಆರೋಪಿಯ ತಂದೆಯೂ ಅದನ್ನೇ ಹೇಳಿದ್ದಾರೆ. ಕಾರು ಓಡಿಸುತ್ತಿದ್ದದ್ದು ಚಾಲಕನೇ' ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
'ಜಾಮೀನು ರದ್ದಾಗಿಲ್ಲ'
ಆರೋಪಿ ಬಾಲಕನಿಗೆ ಪುಣೆಯಲ್ಲಿರುವ ಬಾಲಾಪರಾಧ ನ್ಯಾಯ ಮಂಡಳಿ (ಜೆಜೆಬಿ) ಘಟನೆ ವರದಿಯಾದ ಕೆಲವೇ ಹೊತ್ತಿನಲ್ಲಿ ಜಾಮೀನು ನೀಡಿತ್ತು.
'ಕಾನೂನು ಸಂಘರ್ಷಕ್ಕೆ ಒಳಪಟ್ಟಿರುವ ಬಾಲಕನು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ, ರಸ್ತೆ ಸಂಚಾರ ನಿಯಮಗಳನ್ನು ಅರಿಯಬೇಕು ಮತ್ತು ರಸ್ತೆ ಸುರಕ್ಷತೆ ಹಾಗೂ ಅದರ ಪರಿಹಾರೋಪಾಯಗಳ ಕುರಿತು 15 ದಿನದಲ್ಲಿ 300 ಪದಗಳ ಪ್ರಬಂಧ ಸಲ್ಲಿಸಬೇಕು' ಎಂದು ಆದೇಶಿಸಿತ್ತು.
ಈ ಆದೇಶಕ್ಕ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಜೆಜೆಬಿ ತನ್ನ ಆದೇಶವನ್ನು ಬುಧವಾರ ರದ್ದುಗೊಳಿಸಿದೆ. ಅಲ್ಲದೆ, ಈ ಬಾಲಕನನ್ನು ಜೂನ್ 5 ರವರೆಗೆ ಬಾಲ ವೀಕ್ಷಣಾ ಮಂದಿರಕ್ಕೆ ಕಳುಹಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಬಾಲಕನ ಪರ ವಕೀಲರು 'ಜಾಮೀನು ರದ್ದಾಗಿಲ್ಲ'. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನನ್ನು ವಯಸ್ಕ ಎಂದು ಪರಿಗಣಿಸಲು ಪೊಲೀಸರು ಸಲ್ಲಿಸಿರುವ ಅರ್ಜಿ ಬಗ್ಗೆ ಜೆಜೆಬಿ ಯಾವುದೇ ಆದೇಶ ನೀಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಬಾಲಕನಿಗೆ ಕಾರು ಚಲಾಯಿಸಲು ಅನುಮತಿ ನೀಡಿದ ಕಾರಣ ಆತನ ತಂದೆ, ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್‌ವಾಲ್, ಮುಂಧ್ವಾ ಪ್ರದೇಶದಲ್ಲಿರುವ ಎರಡು ಮದ್ಯ ಮಾರಾಟ ಸಂಸ್ಥೆಗಳ ಮಾಲೀಕರು ಹಾಗೂ ಸಿಬ್ಬಂದಿ ವಿರುದ್ಧ ಬಾಲಕನಿಗೆ ಮದ್ಯ ಪೂರೈಸಿದ ಅಪರಾಧದಲ್ಲಿ ಪ್ರಕರಣಗಳು ದಾಖಲಾಗಿವೆ.