ಬಾರಾಮುಲ್ಲಾ: ಒಂದು ಕಾಲದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಹಲವು ವರ್ಷಗಳ ಬೆದರಿಕೆ ನಂತರ ಜನರು ಮನೆಯಿಂದ ಹೊರಗೆ ಬಂದು ಸೋಮವಾರ ತಮ್ಮ ಹಕ್ಕು ಚಲಾಯಿಸಿದರು.
ಒಂದು ಕಾಲದಲ್ಲಿ ಪ್ರತ್ಯೇಕತಾವಾದಿಗಳಿಂದ ಚುನಾವಣೆ ಬಹಿಷ್ಕಾರಕ್ಕೆ ಕರೆ, ಬೆದರಿಕೆಯಂತಹ ಘಟನೆಯಿಂದಾಗಿ ಚುನಾವಣೆಯಿಂದ ದೂರ ಉಳಿಯುತ್ತಿದ್ದ ಸೋಪೋರ್‌ನ ಡೆಲಿನಾ ಮತಗಟ್ಟೆ ಕೇಂದ್ರದ ಹೊರಗೆ ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಕಳೆದ ಮೂರು ದಶಕಗಳಲ್ಲಿಯೇ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇವೆ. ನಮ್ಮ ಉತ್ತಮ ಭವಿಷ್ಯಕ್ಕಾಗಿ ನಾವು ಬಂದು ಮತ ಚಲಾಯಿಸಲು ನಿರ್ಧರಿಸಿದ್ದೇವೆ ಎಂದು 40 ವರ್ಷದ ಮತದಾರ ಜಾವೇದ್ ಅಹ್ಮದ್ ಗುರು ಹೇಳಿದರು. ಪ್ರತ್ಯೇಕತಾವಾದಿಗಳ ನೇತೃತ್ವದ ಬಹಿಷ್ಕಾರ ಕರೆಗಳು ಮತ್ತು ಹಿಂಸಾಚಾರದ ಬೆದರಿಕೆಗಳು ಈ ಹಿಂದೆ ತಮ್ಮನ್ನು ಮತಗಟ್ಟೆಗಳಿಂದ ದೂರವಿಟ್ಟಿದ್ದವು ಎಂದು ಮತದಾರರಾದ ಮೊಹಮ್ಮದ್ ಸುಲ್ತಾನ್ ಭಟ್ ಮತ್ತು ಅಬ್ದುಲ್ ರಶೀದ್ ಒಪ್ಪಿಕೊಂಡರು.
ಬಾರಾಮುಲ್ಲಾ ಕ್ಷೇತ್ರದಿಂದ ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ ಮತ್ತು ಪ್ರತ್ಯೇಕತಾವಾದಿ-ರಾಜಕಾರಣಿ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜ್ಜದ್ ಲೋನ್ ಸೇರಿದಂತೆ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಐಪಿಯ ರಶೀದ್ ಅವರ ಸ್ಪರ್ಧೆ ಆಸಕ್ತಿದಾಯಕವಾಗಿಸಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಭ್ಯರ್ಥಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಫಯಾಜ್ ಮಿರ್ ಕೂಡ ಕಣದಲ್ಲಿದ್ದಾರೆ.
ಶ್ರೀನಗರದಿಂದ 55 ಕಿಮೀ ದೂರದಲ್ಲಿರುವ ಸೋಪೋರ್, ಅಕ್ಕಪಕ್ಕದ ಪ್ರದೇಶಗಳು ಈ ಹಿಂದೆ ಪ್ರತ್ಯೇಕತಾವಾದಿ ಪ್ರಾಯೋಜಿತ ಚುನಾವಣಾ ಬಹಿಷ್ಕಾರ ಕರೆಗಳಿಗೆ ಹೆಚ್ಚಾಗಿ ಪ್ರತಿಕ್ರಿಯಿಸಿವೆ. 2019 ರ ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.