ವರ್ಕಾಡಿ ಸುಂಕದಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಛಾಯಾಫಲಕ ಪ್ರತಿಷ್ಠೆ ಹಾಗೂ ಮಂದಿರದ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು. ಸಂಜೆ ಸಾಮೂಹಿಕ ಪ್ರಾರ್ಥನೆ, ಆಲಯ ಪರಿಗ್ರಹ, ಸ್ಥಳಶುದ್ಧಿ, ವಾಸ್ತುಪೂಜೆ, ವಾಸ್ತು ಹೋಮ, ಸುದರ್ಶನಹೋಮ, ಪ್ರಾಕಾರ ಬಲಿ ನಡೆಯಿತು.
ಪರಮಪೂಜ್ಯ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಅವರ ಶುಭಾಶೀರ್ವಾದಗಳೊಂದಿಗೆ, ಮಂಗಳೂರು ಕಂಕನಾಡಿ ಗರಡಿ ಕ್ಷೇತ್ರದ ವೇದಮೂರ್ತಿ ಗಂಗಾಧರ ಶಾಂತಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. 2ರಂದು ಬೆಳಗ್ಗೆ 6ರಿಂದ ಗಣಹೋಮ, ಕಲಶಪೂಜೆ, ಬೆಳಗ್ಗೆ 10.14ಕ್ಕೆ ನಡೆಯುವ ಮಿಥುನಲಗ್ನ ಮುಹೂರ್ತದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಛಾಯಾಫಲಕ ಪ್ರತಿಷ್ಠೆ, ಕಲಶಾಭಿಷೇಕ, ಗುರುಪೂಜೆ ನಡೆಯುವುದು. ಮಧ್ಯಾಹ್ನ 12.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಮತ್ತು ವೇದಮೂರ್ತಿ ಗಂಗಾಧರ ಶಾಂತಿ ಆಶೀರ್ವಚನ ನೀಡುವರು. ನಿವೃತ್ತ ಮುಖ್ಯ ಶಿಕ್ಷಕ ಬಂಟಪ್ಪ ಪೂಜಾರಿ ಕಳಿಯೂರು ಅಧ್ಯಕ್ಷತೆ ವಹಿಸುವರು. ಮಾಣಿ ಘಟಕ ಯುವವಾಹಿನಿಯ ರೇಣುಕಾ ಕಣಿಯೂರು ಗುರುಸಂದೇಶ ನೀಡುವರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ನಾಳ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ವತಿಯಿಂದ 'ಕಾಡ ಮಲ್ಲಿಗೆ'ಯಕ್ಷಗಾನ ಬಯಲಾಟ ಜರುಗಲಿರುವುದು.