ನವದೆಹಲಿ (PTI): ಅಬಕಾರಿ ನೀತಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ಪಕ್ಷದ ನಾಯಕಿ ಕೆ. ಕವಿತಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಪೂರಕ ದೋಷಾರೋಪಪಟ್ಟಿಯನ್ನು ಗುರುತಿಸಬೇಕೇ ಎಂಬ ಬಗ್ಗೆ ಇ.ಡಿ ಮತ್ತು ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯವು ಮೇ 31ರಂದು ಆದೇಶ ಹೊರಡಿಸುವ ಸಾಧ್ಯತೆ ಇದೆ.
ಕವಿತಾ ಅವರ ವಿರುದ್ಧ ಕ್ರಮ ಜರುಗಿಸಲು ಸಾಕಷ್ಟು ಪುರಾವೆಗಳು ಇವೆ ಎಂದು ಇ.ಡಿ ಹೇಳಿದ್ದನ್ನು ಪರಿಗಣಿಸಿದ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಆದೇಶ ಕಾಯ್ದಿರಿಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಕ್ರಮ ಜರುಗಿಸುವುದಕ್ಕೆ ಕೂಡ ಸಾಕಷ್ಟು ಪುರಾವೆಗಳು ಇವೆ ಎಂದು ಇ.ಡಿ ಹೇಳಿದೆ.
ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧದ ಹೆಚ್ಚುವರಿ ದೋಷಾರೋಪಪಟ್ಟಿಯನ್ನು ಪರಿಗಣಿಸಲು ನ್ಯಾಯಾಲಯವು ಮೇ 28ಕ್ಕೆ ವಿಚಾರಣೆ ನಿಗದಿ ಮಾಡಿದೆ.