ವಾಷಿಂಗ್ಟನ್: 'ಈ ವರ್ಷ ಅಥವಾ ಮುಂದಿನ ವರ್ಷ ಜಂಟಿ ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಭಾರತೀಯ ಗಗನಯಾತ್ರಿಗಳಿಗೆ ನಾಸಾ ಶೀಘ್ರದಲ್ಲೇ ಅತ್ಯಾಧುನಿಕ ತರಬೇತಿ ನೀಡಲಿದೆ' ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.
ವಾಷಿಂಗ್ಟನ್: 'ಈ ವರ್ಷ ಅಥವಾ ಮುಂದಿನ ವರ್ಷ ಜಂಟಿ ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಭಾರತೀಯ ಗಗನಯಾತ್ರಿಗಳಿಗೆ ನಾಸಾ ಶೀಘ್ರದಲ್ಲೇ ಅತ್ಯಾಧುನಿಕ ತರಬೇತಿ ನೀಡಲಿದೆ' ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಅಮೆರಿಕ- ಭಾರತ ವ್ಯಾಪಾರ ಮಂಡಳಿ (ಯುಎಸ್‌ಐಬಿಸಿ) ಆಯೋಜಿಸಿದ್ದ ಅಮೆರಿಕ- ಭಾರತ ವಾಣಿಜ್ಯ ಬಾಹ್ಯಾಕಾಶ ಸಮಾವೇಶದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
'ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಜಂಟಿ ಪ್ರಯತ್ನದ ಭಾಗವಾಗಿ ಭಾರತೀಯ ಗಗನಯಾತ್ರಿಗಳಿಗೆ ನಾಸಾದಿಂದ ಈ ವರ್ಷ ಅಥವಾ ಮುಂಬರುವ ಕೆಲ ದಿನಗಳಲ್ಲಿ ಅತ್ಯಾಧುನಿಕ ತರಬೇತಿ ನೀಡಲಾಗುವುದು. ನಮ್ಮ ಉಭಯ ರಾಷ್ಟ್ರಗಳ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದ ವೇಳೆ ನೀಡಿದ ಭರವಸೆಗಳಲ್ಲಿ ಇದೂ ಕೂಡ ಇತ್ತು' ಎಂದು ಹೇಳಿದರು.
ಉಡ್ಡಯನ:
'ಪರಿಸರ ವ್ಯವಸ್ಥೆಗಳು, ಭೂಮಿಯ ಮೇಲ್ಮೈ, ನೈಸರ್ಗಿಕ ವಿಪತ್ತುಗಳು, ಸಮುದ್ರ ಮಟ್ಟ ಏರಿಕೆ ಮತ್ತು ಕ್ರಯೋಸ್ಫಿಯರ್ ಮೇಲೆ ಹವಾಮಾನ ಬದಲಾವಣೆಯ ಪ್ರಭಾವ ಸೇರಿದಂತೆ ವಿವಿಧ ವಿದ್ಯಮಾನಗಳ ಎಲ್ಲಾ ಸಂಪನ್ಮೂಲಗಳನ್ನು ಮೇಲ್ವಿಚಾರಣೆ ಮಾಡಲು ನಾವು ಶೀಘ್ರದಲ್ಲೇ ನಿಸಾರ್ (ಎನ್‌ಐಎಸ್‌ಎಆರ್) ಉಪಗ್ರಹವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಿದ್ದೇವೆ' ಎಂದು ಇಲ್ಲಿ ಬಿಡುಗಡೆ ಮಾಡಿದ ಯುಎಸ್‌ಐಬಿಸಿ ಪತ್ರಿಕಾ ಪ್ರಕಟೆಯಲ್ಲಿ ಹೇಳಲಾಗಿದೆ.
ನಿಸಾರ್ ಉಪಗ್ರಹವು ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಡುವಿನ ಜಂಟಿ ಭೂ-ವೀಕ್ಷಣೆ ಕಾರ್ಯಾಚರಣೆಯಾಗಿದೆ.
ಕಾರ್ಯಕ್ರಮದಲ್ಲಿ ಗಾರ್ಸೆಟ್ಟಿ, ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್, ನಾಸಾ ಮತ್ತು ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ (ಎನ್‌ಒಎಎ) ಪ್ರತಿನಿಧಿಗಳು ಸೇರಿದಂತೆ ಅಮೆರಿಕ ಮತ್ತು ಭಾರತ ಎರಡೂ ಸರ್ಕಾರಗಳ ಹಿರಿಯ ಅಧಿಕಾರಿಗಳು, ವಾಣಿಜ್ಯ ಬಾಹ್ಯಾಕಾಶ ಉದ್ಯಮ ಪ್ರಮುಖರು, ಉದ್ಯಮ ಪಾಲುದಾರರು, ಬಂಡವಾಳ ಹೂಡಿಕೆ ಪ್ರಮುಖರು ಹಾಗೂ ಮಾರುಕಟ್ಟೆ ವಿಶ್ಲೇಷಕರು ಭಾಗವಹಿಸಿದ್ದರು.