ಜೆರುಸಲೇಂ: ಪ್ಯಾಲೆಸ್ಟೀನ್‌ನ ದಕ್ಷಿಣ ಗಾಜಾ ನಗರ ಭಾಗದಲ್ಲಿರುವ ರಫಾ ಪ್ರದೇಶ ತೊರೆಯುವಂತೆ ಸಾವಿರಾರು ಮಂದಿಗೆ ಇಸ್ರೇಲ್ ಸೇನೆ ಸೋಮವಾರ ಸೂಚಿಸಿದೆ. ಈ ಮೂಲಕ ಈ ಪ್ರದೇಶದಲ್ಲೂ ದಾಳಿ ನಡೆಸುವ ಮುನ್ಸೂಚನೆ ನೀಡಿದೆ. ಹಮಾಸ್ ಬಂಡುಕೋರರು ನಡೆಸಿದ ರಾಕೆಟ್ ದಾಳಿಯಲ್ಲಿ ಮೂವರು ಇಸ್ರೇಲ್ ಸೈನಿಕರು ಮೃತಪಟ್ಟಿರುವ ಬೆನ್ನಲ್ಲೇ, ಇಸ್ರೇಲ್ 'ರಫಾ' ಮೇಲೆ ದಾಳಿ ನಡೆಸಲು ಯೋಜಿಸಿದೆ.
ರಫಾ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆಗೆ ನಿರ್ಧರಿಸಲಾಗಿದೆ. ಇದು ಮುಂದೆ ದೊಡ್ಡ ಮಟ್ಟದ ಯುದ್ಧಕ್ಕೆ ಕಾರಣವಾಗಬಹುದು. ಹೀಗಾಗಿ, ರಫಾ ಪ್ರದೇಶದಲ್ಲಿರುವ ಸುಮಾರು ಒಂದು ಲಕ್ಷ ಮಂದಿಯನ್ನು ಇಸ್ರೇಲ್‌ನ ಮಾನವೀಯ ನೆಲೆ 'ಮುವಾಸಿ' ಎಂಬಲ್ಲಿಗೆ ತೆರಳುವಂತೆ ಸೂಚಿಸಲಾಗಿದೆ. ರಫಾದ ಯಾವೆಲ್ಲಾ ಪ್ರದೇಶಗಳ ಜನರು ಬೇರೆಡೆಗೆ ತೆರಳಬೇಕು ಎಂದು ನಕ್ಷೆಯನ್ನು ತಯಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. 'ಮುವಾಸಿ'ಯಲ್ಲಿ ಆಹಾರ, ನೀರು, ಆಸ್ಪತ್ರೆಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದೂ ಹೇಳಿದೆ.
'ರಫಾ' ಹಮಾಸ್ ಬಂಡುಕೋರರ ಪ್ರಾಬಲ್ಯದ ಪ್ರದೇಶವಾಗಿದ್ದು, ಇಸ್ಲಾಮಿಕ್ ಉಗ್ರ ಸಂಘಟನೆಯನ್ನು ಧ್ವಂಸಗೊಳಿಸಲು ರಫಾ ಮೇಲೆ ದಾಳಿ ನಡೆಸಲೇಬೇಕು ಎಂದು ಇಸ್ರೇಲ್ ಪ್ರತಿಪಾದಿಸುತ್ತಾ ಬಂದಿದೆ.