ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಯನ್ನು ಅಪಹರಿಸಿ ದೌರ್ಜನ್ಯವೆಸಗಿ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿ, ಕೊಡಗು ನಿವಾಸಿ, ಪಿ.ಎ ಸಲೀಮ್‍ನನ್ನು ಗುರುವಾರ ತಡರಾತ್ರಿ ಕಾಞಂಗಾಡು ಡಿವೈಎಸ್‍ಪಿ ಕಚೇರಿಗೆ ಕರೆತರಲಾಗಿದ್ದು, ಶುಕ್ರವಾರ ವಿವಿಧ ಪ್ರದೇಶಗಳಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಾಯಿತು.
ಬಾಲಕಿಯನ್ನು ಮನೆಯಿಂದ ಅಪಹರಿಸಿ, ಸುಮಾರು 500ಮೀ. ದೂರ ಕರೆದೊಯ್ದು, ನಿರ್ಜನ ಪ್ರದೇಶದಲ್ಲಿ ದೌರ್ಜನ್ಯವೆಸಗಿರುವುದಾಗಿ ಮಾಹಿತಿ ಲಭಿಸಿದ ಜಾಗಕ್ಕೆ ಆರೋಪಿಯನ್ನು ಕರೆದೊಯ್ದು ಮಾಹಿತಿ ಸಂಗ್ರಹಿಸಲಾಯಿತು. ಬಾಲಕಿ ಮೈಮೇಲಿದ್ದ ಚಿನ್ನಾಭರಣವನ್ನು ಕೂತುಪರಂಬದ ಜ್ಯುವೆಲ್ಲರಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ. ಮಾರಾಟಮಾಡಲಾದ ಚಿನ್ನಾಭರಣ ವಶಪಡಿಸಿಕೊಳ್ಳಲು ಪೊಲೀಸರು ಕ್ರಮ ಆರಂಭಿಸಿದ್ದಾರೆ. ಬಾಲಕಿ ದೌರ್ಜನ್ಯವೆಸಗುವ ಎರಡು ದಿವಸಗಳ ಹಿಂದೆ ಮಹಿಳೆಯೊಬ್ಬರ ಕತ್ತಿನಿಂದ ಸರ ಎಗರಿಸಿ ಪರರಿಯಾಗಿದ್ದು, ನಂತರ ಇದು ನಕಲಿ ಚಿನ್ನ ಎಂದು ಸಾಬೀತಾಗಿತ್ತು. ಈ ಘಟನೆಯೂ ಆರೋಪಿ ಪತ್ತೆಗೆ ಸುಳಿವು ನೀಡಿತ್ತು.
ಕೃತ್ಯವೆಸಗಿ ಮನೆಯಲ್ಲೇ ಅಡಗಿದ್ದ:
ಬಾಲಕಿಯ ದೌರ್ಜನ್ಯವೆಸಗಿದ ನಂತರ ಆರೋಪಿ ನೇರ ಪತ್ನಿ ಮನೆಗೆ ತೆರಳಿ, ಮನೆಯವರ ಅರಿವಿಗೂ ಬಾರದೆ ಮನೆಮಹಡಿಯೇರಿ ಕುಳಿತಿದ್ದಾನೆ. ಅನ್ನ,ಆಹಾರವಿಲ್ಲದೆ ತಾನು ಐದು ದಿವಸ ಮನೆಯ ಮಹಡಿಯಲ್ಲಿ ಕುಳಿತಿದ್ದು, ಐದನೇ ದಿನದಂದು ಮಹಡಿಯಿಳಿದು ನೇರ ಮೈಸೂರು ಕಡೆ ಪ್ರಯಾಣ ಬೆಳೆಸಿರುವುದಾಘಿ ಪೊಲೀಸರಲ್ಲಿ ತಿಳಿಸಿದ್ದಾನೆ. ಈತ ಮೊಬೈಲ್ ಬಳಕೆ ಮಾಡದೆ, ಯಾರ್ಯಾರದೋ ಮೊಬೈಲನ್ನು ಸಂಭಾಷಣೆಗೆ ಬಳಸುತ್ತಿದ್ದನುಡೀ ನಿಟ್ಟಿನಲ್ಲಿ ಪೊಲೀಸರು ಈತನ ಪತ್ನಿಯ ಮೊಬೈಲನ್ನು ನಿರೀಕ್ಷಿಸುತ್ತಿರುವ ಮಧ್ಯೆ, ಈತ ಮನೆಗೆ ಪತ್ನಿಯ ಮೊಬೈಲಿಗೆ ಕರೆಮಾಡಿ ಸಿಲುಕಿಕೊಂಡಿದ್ದಾನೆ.
ಸ್ಥಳೀಯರ ಆಕ್ರೋಶ:
ಬಲಕಿಯ ದೌರ್ಜನ್ಯವೆಸಗಿದ್ದ ಆರೋಪಿಯನ್ನು ಘಟನಾಸ್ಥಳಕ್ಕೆ ಕರೆತರುತ್ತಿದ್ದಂತೆ ಸ್ಥಳೀಯರಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಕೆಲವರು ಆರೋಪಿ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಪೊಲೀಸರು ಇವರನ್ನು ತಡೆದಿದ್ದಾರೆ. ಮನೆಯೊಳಗಿಂದ ಹೆಣ್ಮಗಳನ್ನು ಎತ್ತಿಕೊಂಡು ಹೋಗಿ ದೌರ್ಜನ್ಯವೆಸಗಿರುವ ಪಾಪಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ತಮ್ಮ ರೋಷ ವ್ಯಕ್ತಪಡಿಸಿದ್ದಾರೆ.
ಉತ್ತರ ವಲಯ ಐ.ಜಿ ಥಾಮ್ಸನ್ ಜೋಸ್, ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ನೇತೃತ್ವದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ, ಘಟನೆ ನಡೆದು ಒಂಬತ್ತು ದಿವಸಗಳ ನಂತರ ಆರೋಪಿಯನ್ನು ಸೆರೆಹಿಡಿದಿದೆ. ಕಾಞಂಗಾಡು ಡಿವೈಎಸ್‍ಪಿ ಪಿ.ವಿ ರತೀಶ್ ತನಿಖಾ ತಂಡದ ನೇತೃತ್ವ ವಹಿಸಿದ್ದರು.