ಕಾಸರಗೋಡು: ಬಿರುಸಿನ ಗಾಳಿ, ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಮೀನುಗಾರಿಕಾ ದೋಣಿಯೊಂದು ಕಾಸರಗೋಡು ನೆಲ್ಲಿಕುಂಜೆ ಕಡಪ್ಪುರದ ಲೈಟ್‍ಹೌಸ್ ಸನಿಹ ದಡಕ್ಕೆ ಅಪ್ಪಳಿಸಿ ಮುಂದಕ್ಕೆ ಸಾಗಲಾರದೆ ಸ್ಥಗಿತಗೊಂಡಿದೆ. ದೋಣಿಯಲ್ಲಿ ಆರು ಮಂದಿ ಮೀನುಗಾರರಿದ್ದು, ಇವರೆಲ್ಲರನ್ನೂ ಸುರಕ್ಷಿತವಾಗಿ ದಡ ಸಏರಿಸಲಾಗಿದೆ. ಸ್ಥಳೀಯ ಮೀನುಗಾರರು, ನಾಗರಿಕರು ಹಾಗೂ ಕರಾವಳಿ ಪೊಲೀಸರು ದೋಣಿಯನ್ನು ಮತ್ತೆ ನೀರಿಗಿಳಿಸಿ ಸುರಕ್ಷಿತವಾಗಿ ಕಾಸರಗೋಡು ಮೀನುಗಾರಿಕಾ ಬಂದರಿಗೆ ತಲುಪಿಸಲಾಗಿದೆ.
ನೀಲೇಶ್ವರ ಭಾಗಕ್ಕೆ ಸಾಗುತ್ತಿದ್ದ ಮೂರು ದೋಣಿಗಳಲ್ಲಿ ಒಂದು ದೋಣಿ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಮುಂದಕ್ಕೆ ಸಾಗಲಾರದೆ ದಡಕ್ಕೆ ಬಂದು ಸೇರಿತ್ತು. ಸಮುದ್ರ ಪ್ರಕ್ಷುಬ್ಧಗೊಳ್ಳುವ ಬಗ್ಗೆ ಇಲಾಖೆ ನೀಡಿರುವ ಸೂಚನೆ ಪಾಲಿಸದೆ ದೋಣಿಗಳು ಸಮುದ್ರಕ್ಕಿಳಿದಿರುವುದಾಗಿ ಮಾಹಿತಿಯಿದೆ. ಗುರುವಾರ ರಾತ್ರಿ 9ಕ್ಕೆ ಆರಂಭಗೊಂಡ ಕಾರ್ಯಾಚರಣೆ ಶುಕ್ರವಾರ ನಸುಕಿನ ವರೆಗೂ ಮುಂದುವರಿದಿತ್ತು.